Sunday, 26 June 2011

ಚುಟುಕುಗಳು

ಹೊಸ ಅಭಿಯಾನ
-----------------
ಅಹಂಕಾರಕೆ ಉದಾಸೀನವೇ ಮದ್ದು
ದೃಢ ಮನಸ್ಸಿನಿಂದ ಮಧರ್ಿಸದನ ಒದ್ದು
ನನ್ನಿಂದ, ನಾನು, ನನ್ನದು ದುರಭಿಮಾನ
ಪ್ರತಿಷ್ಠೆ ಬಿಟ್ಟು ಸಾಗಲಿ ಹೊಸ ಅಭಿಯಾನ.


ಕಪ್ಪು ಹಣ
---------
ರಾಜಕೀಯದಲಿ ಒಂದೇ ಹವಾಗುಣ
ಮೂರು ತಲೆಮಾರು ಕೂತು ತಿನ್ನಲು ಹಣ
ಇದನ ಕೂಡಿಸಲು ನಾನಾ ತರಹದ ಹಗರಣ
ಲೋಕಾಯುಕ್ತರು ಹೊರಗೆಳೆವರದರ ಹೂರಣ.


ಸಾರಾಯಿ ಸಹವಾಸ
-----------------
ಸೇಂದಿ ಸಾರಾಯಿಯಿಂದ ಸರ್ವವೂ ನಾಶ
ಅಣುಅಣುವಾಗಿ ಜೀವ ನುಂಗುವ ವಿಷ
ಹೆಂಡತಿ ಮಕ್ಕಳು ನಿರಂತರ ಉಪವಾಸ
ವ್ಯಸನ ಮುಕ್ತ ಬಾಳು ಎಂದೂ ನವೋಲ್ಲಾಸ.


ದೃಢ ಮನಸ್ಸು
-----------
ಬದುಕೆಂದಿಗೂ ಜೀವಂತಿಕೆಯ ಸಂಕೇತ
ಜೀವನದಿ ಸಾವು ನೋವು ಅಸಂಖ್ಯಾತ
ಆತ್ಮಹತ್ಯೆ ಮನುಜಗೊಲಿದ ಸಸಾರ ವಿದ್ಯೆ
ಮನೋಸ್ಥೈರ್ಯ ದೃಢವಿರಲಿ ಬಾಳಿನ ಮಧ್ಯೆ.


ಆಪತ್ತಿಗಾದವ
-----------
ದಾನದಿಂದ ದೊರೆತುದು ಪವಿತ್ರ ತೃಪ್ತಿ
ದೇವಗೆ ಸಮಾನ ಆಪತ್ತಿಗಾದ ವ್ಯಕ್ತಿ
ಸಮಯಕ್ಕೆ ಸಂದ ಸಹಕಾರ ಸಹಾಯ
ತೀರಿಸಲಾಗದ ಅಪರಿಮಿತ ಆದಾಯ.


ಹೊಸ ಹಾದಿ
----------
ನೆತ್ತಿಗೇರಿದರೆ ಯಶಸ್ಸಿನ ಪಿತ್ತ
ಅಂತವರ ಅಸ್ಥಿತ್ವ ಅಗೋಚರದತ್ತ
ಲೌಕಿಕತೆಯಿಂದ ಪಾರಮಾರ್ಥದ ಕಡೆಗೆ
ಹಾಕಿರೆಲ್ಲ ಆಧ್ಯಾತ್ಮದ ದಿಟ್ಟ ನೆಡಿಗೆ.


ಶಾಶ್ವತ ಶಕ್ತಿ
--------
ಪಂಚೇಂದ್ರಿಯಗಳ ನಿಧರ್ಿಷ್ಠ ನಿಯಂತ್ರಣ
ಭಗವಂತನು ನೆಲೆಸುವ ಸಮೃದ್ಧ ತಾಣ
ಯಶಸ್ಸಿನ ಮೂಲ ಮಂತ್ರವೇ ಭಕ್ತಿ
ಅದೇ ಬಾಳಿನ ಕೊನೆತನಕ ನೆಲೆಸೊ ಶಕ್ತಿ.


ಜಾತಿ ರಹಿತ ಸಮಾಜ
---------------
ಪ್ರೀತಿ ವಿಶ್ವಾಸದಿಂದ ಸಮಾಜವ ಕಟ್ಟಿ
ವ್ಯವಸ್ಥಿತ ರೂಪುಗೊಂಡಾಗ ಬಲು ಗಟ್ಟಿ
ಜಾತಿ ವರ್ಗ ರಹಿತ ಸಮಾಜ ನಿಮರ್ಾಣ
ದೇಶದ ಸಮಗ್ರ ಏಳ್ಗೆಗೆ ರಾಮಭಾಣ.


ನೇಗಿಲಯೋಗಿ
----------
ಉದರ ತೃಷೆ ನೀಗಿಸೋ ಓ ನಮ್ಮ ರೈತ
ದೇಶವೇ ಸಾಲದ ಕೂಪದಲ್ಲಿದೆ ಗೊತ್ತಾ?
ನೀನ್ಯಾಕೆ ಸಾಯ್ತಿ ಜುಜುಬಿ ಸಾಲಕ್ಕೆ ಅಂಜಿ
ನಿವ್ರ್ಯಸನದ ಬಾಳು ಸವೆ ಕುಡಿದಾದರೂ ಗಂಜಿ.


ಅತಿಯಾದಾಗ
--------------
ಗಲ್ಲಿಗಲ್ಲಿಲೊಂದು ಕುಲ ದೇವರ ಗುಡಿ
ಜೊತೆ ಸಂದಿಗೊಂದಿಲೊಂದು ಶೇಂದಿ ಅಂಗ್ಡಿ
ಇವೆರಡೂ ಸಮಾಜದ ಅವಿಭಾಜ್ಯ ಅಂಗ
ಅತಿಯಾದರೆ ಸಾಮಾನ್ಯರ ಶಾಂತತೆಗೆ ಭಂಗ.


ಸಹಕಾರಿ ಸಂಘ
-------------
ಸಹಕಾರಿ ಕ್ಷೇತ್ರ ಸರಕಾರಕ್ಕೂ ಹಿರಿದು
ಬೃಷ್ಟರು ಸೇರಿದರೆ ಅವೆಲ್ಲ ಬರಿದು
ಸಂಘ ಸಂಸ್ಥೆಗಳು ದೇಶದ ದೊಡ್ಡ ಆಸ್ತಿ.
ಅಲ್ಲೂ ನಡೆಯುತ್ತಿದೆ ಕುಚರ್ಿಗಾಗಿ ಕುಸ್ತಿ.


ಮಿತ ಸಂತಾನ
-----------
ಒಂದು ಬುಡದಿ ಒಡಮೂಡಲು ಹಲವು ಟಿಸಿಲು
ಉಗ್ರಾಣ ತುಂಬ ಭರಪೂರ ಫಸಲು
ಈ ಕಲ್ಪನೆ ಬಾಳ ತಪ್ಪು ತಿಳಿ ಮೂಢಾ
ಸಂಸಾರಕ್ಕೂ ಅನ್ವಯಿಸುತ್ತೆ ನೋಡಾ.


ಒಂದೇ ರಕ್ತ
---------
ಧರ್ಮಕ್ಕಾಗಿ ಹೋರಾಟ ಮೂಢರ ಕರ್ಮ
ಕರ್ಮಕ್ಕಾಗಿ ಹೋರಾಟ ನಿಜವಾದ ಧರ್ಮ
ಮನ ಪಂಥ ತೊರೆದ ಬಾಳ್ವೆ, ಮನುಜ ಮತದ ಮರ್ಮ
'ಸ್ವರ್ಣ ವರ್ಣಗೊಡವೆಯೇಕೆ? ನಾವೆಲ್ಲ ಒಂದೇ ಚರ್ಮ.


ಹೆಲ್ಮೇಟು ಧಾರಣೆ
------------
ಬೈಕಿನಿಂದ ಉರುಳಿ ಬಿದ್ದಲ್ಲಿ ತಲೆಗೇಟು
ತಪ್ಪದೇ ಶಿರದಲಿ ಧರಿಸಿರಿ ಹೆಲ್ಮೇಟು
ಬೀದಿ ಪಾಲಾಗುವುದು ನಿಮ್ಮಯ ಸಂಸಾರ
ಆಗ ಏನು ತಾನೇ ಮಾಡೀತು ಸರಕಾರ?


ಸ್ವರ್ಣವಲ್ಲೀ
---------
ಶ್ರೀ ಸೋಂದಾ ಸ್ವರ್ಣವಲ್ಲೀ ಸಂಸ್ಥಾನ
ಅದ್ವೈತ ಭಕ್ತರಿಗಿದು ಕೇಂದ್ರ ಸ್ಥಾನ
ಹಿಂದೂ ಸಂಸ್ಕ್ರತಿಯ ಪುನರುಜ್ಜೀವನ
ಶಿಷ್ಯಕೋಟಿ ಜನರ ಜೀವನ ಪಾವನ.


ಸ್ವರ್ಗದ ನಂಟು
------------
ಗುರು ಹಿರಿಯರಿಗೆ ಮಾಡದೆಯೆ ನಿಂದನೆಯ
ರೂಢಿಸಿದರೆ ಪ್ರತಿನಿತ್ಯ ಸಂಧ್ಯಾವಂದನೆಯ
ತುಂಬುವುದು ಪುಣ್ಯದ ಇಡಿ ಗಂಟು
ಜೀವಿತದಿ ಪೂರ್ಣ ಸಗ್ಗ ಸುಖದ ನಂಟು.


ಮನಃಶುದ್ಧಿ
--------
ಮಾಡಿದರೆ ತುಂಬು ಕಂಠದಿ ವೇದಾಧ್ಯಯನ
ಕೇಳಿದರೆ ಎಡಬಿಡದೆ ಪಾಠ ಪ್ರವಚನ
ನಾಸ್ತಿಕನೂ ಬದಲಾಗುವ ಆಸ್ತಿಕನಾಗಿ
ಶೃದ್ಧೆ ಮೂಡುವುದು ಮನಸ್ಸು ಪವಿತ್ರವಾಗಿ.


ಮಧುಮೇಹ
---------
ಬಂದರೂ ಬಂದೀತು ಜೋಕೆ ಮಧುಮೇಹ
ಬಿಟ್ಟು ಬಿಡಿ ಸಿಹಿ ತಿಂಡಿಗಳ ವ್ಯಾಮೋಹ
ದೇಹಕೆ ದಿನವೂ ಬೇಕು ಶ್ರಮದ ಕಾವು
ಆಗಲೂ ಶಮನವಾದಿರೆ ಇದ್ದೇ ಇದೆ 'ಕಹಿ ಬೇವು'.

ಸಂಘ
-------
ಸೇರಿಕೋ ಸ್ತ್ರೀ ಶಕ್ತಿ ಸಂಘಕ್ಕೆ ಅಕ್ಕ
ಪ್ರತಿ ತಿಂಗಳೂ ಹಾಕು ಹನಿಹನಿ ರೊಕ್ಕ
ಸಾಗುವುದು ಸುಗಮದಿ ಸಂಸಾರದ ಹಾದಿ
ದೇಶದ ಆಥರ್ಿಕತೆಗೆ ಭದ್ರ ಬುನಾದಿ.


ಬುಡುಬುಡಿಕೆ
---------
ಕೇಳುಗರ ಕಿವಿಗಳಿಗೊಂದು ಕಾಲಹರಣ
ರಾಜಕೀಯ ನಾಯಕರ ಉದ್ದುದ್ದ ಭಾಷಣ
ಬುಡವಿಲ್ಲ, ಕೊನೆಯಿಲ್ಲ, ಹುರುಳಿಲ್ಲ ಇದಕೆ
ಹೇಳಿದ್ದನ್ನೇ ಹೇಳುವ ಬುಡಬುಡಿಕೆ.


ವಿಧೇಯತೆ
-------
ಗುರು ಹಿರಿಯರಿಗೆ ತೋರಿದರೆ ನೀ ವಿಧೇಯ
ಅದೇ ಕೊನೆಯಲ್ಲಿ ಉಳಿಯುವಾ ಆದಾಯ
ಅಂತರಂಗ ಬಹಿರಂಗದೊಳಗಡೆ ಶುದ್ಧಿ
ಈ ಪ್ರಯತ್ನದ ಫಲವೇ ಗಳಿಸಿದಾ ಸಿದ್ಧಿ.


ಅಶುದ್ಧ ಸಿದ್ಧಾಂತ!
------------
ಮತಾಂಧ ಭಯೋತ್ಪಾದಕರ ಸಿದ್ಧಾಂತ
ಹೇಳಿದವರ್ಯಾರು ಅದನ್ನ ಶುದ್ಧಾಂತ?
ಒಂದಲ್ಲ ಒಂದಿನ ಇದೆ ಅವರುಗೂ ಅಂತ್ಯ
ಇದೂ ಎಲ್ಲದರಂತೆ ಕಾಣುವುದು ಸುಖಾಂತ್ಯ.


ಧಾರವಾಡ ಪೇಡ
-----------
ಅದ್ಯಾವ ಕಜ್ಜಾಯಕೋ ಇಷ್ಟೊಂದು ಡಾಲ್ಡಾ?
ಖರೀದಿಸು ಮತ್ತೆ ಧಾರವಾಡ ಪೇಡಾ
ಹಂಚಿ ತಿಂದಾಗ ನೀ ಕುಣಿದಂತೆ ಘೋಡಾ

ಮಧು ಮೇಹವಿದ್ದರೂ ತಿಂದೀಯಾ ಮೂಢಾ


ಸಂಸಾರದ ಸೊಗಸು
-------------
ಮಾವನಿಂದ ಕೇಳಬೇಡಿ ಕವಡೆ ಕಾಸು
ಮನೆಯ ಜೊತೆ ಮನವನ್ನೂ ತುಂಬುವಳು ಕೂಸು
ಆ ತುಂಬು ಸಂಸಾರ ಅದೆಂತಾ ಸೊಗಸು
ಯಾರೂ ಆಡಿಕೊಳ್ಳಲಾರರು ಗುಸುಗುಸು


ಬೆಂಬಲ ಬೆಲೆ
----------
ಬೆಂಬಲ ಬೆಲೆಯ ನಿವ್ವಳ ಹಣ ಎಣಿಸುವುದು
ಸಂಪೂರ್ಣ ಅಡಿಕೆ ಬೆಳೆಗಾರರ ಕನಸದು
ಸಕರ್ಾರ ಕೊಟ್ಟಂತ ಅಗ್ರ ತಾಂಬೂಲ
ಸೋರಿ ಹೋಗುತಿದೆ ವ್ಯಾಪಾರಸ್ಥರ ಬಿಲ.


ರೋಗ ರಹಿತ ಬಾಳು
-------------
ಮಾಡದಿರಿ ಮಕ್ಕಳೇ ನೂರೆಂಟು ಚಟವ
ಮಾಡಿದರೆ ಚಟ್ಟಕ್ಕೆ ಹಾಕುವಿರಿ ಘಟವ
ಚಟವಿಲ್ಲದಿರೆ ಬಾಳು ಶ್ರೀಮಂತ ನೋಡು
ರೋಗವಿರದ ಕಾಯ ಹೆಜ್ಜೇನಿನ ಗೂಡು.


ಅಧಿಕಾರ
-------
ಅಕ್ಷರ ಜ್ಞಾನವೇ ಬೇಡವೀ ಕೆಲಸ
ಮುದಿತನವು ಮೂಡಿರಲು ಹೋಗದೀ ಸರಸ
ಸತ್ತರೂ ಮನೆ ಬಿಟ್ಟು ಹೋಗದಧಿಕಾರ
ಮನೆ ಒಡತಿ ಕೈಯಲೇ ಕೀಲಿಕೈ ಪೂರ.


ಗುಂಡಿನ ಗಮ್ಮತ್ತು
-----------
ಕತ್ತಲೆಯ ಮಬ್ಬಲ್ಲಿ ಹಂದಿಗಳ ದಂಡು
ಮುರಿದು ತಿನ್ನುತಲಿತ್ತು ಕಬ್ಬಿನಾ ಹಿಂಡು
ಸದ್ದು ಕೇಳಿದ ಒಡೆಯ ಗೋಲೆಯನು ಕಂಡ
ಓಡಿದವು ಹಂದಿಗಳು ಸಿಡಿಸಲವ ಗುಂಡು.


ಕರ್ತವ್ಯ
------
ಅದೆಷ್ಟು ದಿನ ಉಳಿದು ಕೊಂಡಿತೀ ಪ್ರಾಯ
ಅಷ್ಟರೊಳಗೆ ಹಾಕು ಭದ್ರ ಅಡಿಪಾಯ
ಮಣ್ಣಲಿ ಮುರುಟುವುದರೊಳಗೆ ಈ ದೇಹ
ತೀರಿಸಿಕೊ, ದಯ ದಾನ ಧರ್ಮದಾ ದಾಹ.


ಸ್ವದೇಶಿ ಉಳಿಸಿ
--------
ವಿದೇಶೀ 'ಕೊಕಾಕೋಲಾ ಪೆಪ್ಸಿ' ಎತ್ತಂಗಡಿ
ಬಳಸಿ ಸ್ವದೇಶಿ ಎಳನೀರು ಕಲ್ಲಂಗಡಿ
ಬಡ ರೈತರ ಉದ್ಧಾರ ಪುಣ್ಯದ ಕೆಲಸ
ಅದನ್ನರಿತರೆ ನೀ ಆರೋಗ್ಯದಿ ಅರಸ.


ಹಿಂಡುವಿಕೆ
-------
ನುಂಗಲಾರದ ತುತ್ತು ಉದಾರೀಕರಣ
ಹಿಂದುಗಳ ಹಿಂಡುತಿದೆ ವಿದೇಶೀಕರಣ
ಭಾರತೀಯ ದುಡಿದ ಲಾಭದ ಬಹುಪಾಲು
ವಿದೇಶೀ ಬಹು ರಾಷ್ಟ್ರೀಯ ಕಂಪನಿಪಾಲು


ಅಕ್ಷರ ದಾಸೋಹ
-----------
ಅಕ್ಷರ ದಾಸೋಹ ಬಹು ಒಳ್ಳೆಯ ಕೆಲಸ
ಪ್ಲೆವಿನ್ ಲಾಟರಿ ಹಣ ಮಾತ್ರ ಹೊಲಸ
ಜನಪರ ಕೆಲಸದಿ ಶಕುನಾಪಶಕುನ ಸಲ್ಲ
ಒಗ್ಗಟ್ಟಿನಲಿ ಮುಗ್ಗಟ್ಟಿರದಿರೆ ಎಲ್ಲವೂ ಬೆಲ್ಲ.


ನಮ್ಮ ಬಳಗ
--------
ಬಡ ಭಾರತ ದೇಶದ ಉದ್ಧಾರ ಹೆಂಗ?
'ಹಿಂದೂ ಸೇವಾ ಪ್ರತಿಷ್ಠಾನದೊಳಗ
ಬಂಧುಗಳೇ ಸೇರಿರಿ ಈ ಬಳಗದೊಳಗ
ಇದನ ರೂಪಿಸಿದ ಕಮರ್ಿಗೆ ತೊಡಿಸೋಣ ಕಡಗ.


ಸ್ವಾತಂತ್ರ್ಯೋತ್ಸವ
--------------
ಮುಂಜಾನೆ ತ್ರಿವರ್ಣ ದ್ವಜಾರೋಹಣ
ಪಥ ಸಂಚಲನದಿ ಶಾಲಾ ಬಾಲಕರ ಗಣ
ಸಡಗರ ಸಂಭ್ರಮದ ರಾಷ್ಟ್ರೀಯ ಹಬ್ಬ
ಮಿಂಚುವುದು ರಾಜಕಾರಣಿಗಳ ಜುಬ್ಬ


ನನ್ ಬರಹ
----------
ಪತ್ರಿಕೆಗಳಲ್ಲಿ ಬತರ್ಿದ್ರೆ ನನ್ ಬರಹ
ಸಿಕ್ಕಷ್ಟೇ ಸಂತೋಷ, ಸಾವಿರಾರು ವರಹ
ಬರದೇ ಇದ್ರೆ ನೂರಾರು ತರಹದ ವಿರಹ
ಬರೆಯದಿದ್ದರೂ ನಾನಾಗಿ ಬಿಟ್ಟೇನು ವಿಧುರ!



ಚುನಾವಣೆ ಕಾವು
------------
ಸಮೀಪಿಸುತ್ತಿದ್ದ ಹಾಗೆ ಚುನಾವಣೆ
ಸಾರಾಯಿ ರೂಪಾಯಿಗಳ ಚಲಾವಣೆ
ಏರುತಿರಲು ಆಣೆ ಆಶ್ವಾಸನೆಗಳ ಕಾೆವು
ಜನರ ಮೈಮೇಲೆ ಹರಿದಾಡಿದಂತೆ ಹಾವು.


ಅಗೌರವ
---------
ಗುರು ಹಿರಿಯರಿಗೆ ಪ್ರೀತಿ ಆದರ ಗೌರವ
ಕೊಡದಿರೆ ದೊರಕುವುದು ನರಕದಲಿ ರೌರವ
ಮೊಳಕೆಯೊಡೆದು ಚಿಗಿತಾಗ ಪಾಪದ ವೃತ್ತಿ
ಕಮರದಿರದು ಕೂಡಲೇ ಉರಿದಂತೆ ಹತ್ತಿ.


ಧರ್ಮದ ಮರ್ಮ
------------
ಸತ್ಯ, ಸೇವೆ, ನ್ಯಾಯ ನೀತಿ, ದಾನ, ಧರ್ಮ
ಅರಿತು ನಡೆ ಇವೆಲ್ಲದರೊಳಗಿನ ಮರ್ಮ
ಅದರ ಅರಿವು ಇಲ್ಲದ ಮನುಜನ ಬಾಳು
ಬೆಳೆ ಇರದ ಹೊಲದಿ ಕಳೆ ತೆವವನ ಗೋಳು.


ಅಶುದ್ಧ ಸಿದ್ಧಾಂತ!
------------
ಮತಾಂಧ ಭಯೋತ್ಪಾದಕರ ಸಿದ್ಧಾಂತ
ಹೇಳಿದವರ್ಯಾರು ಅದನ್ನ ಶುದ್ಧಾಂತ?
ಒಂದಲ್ಲ ಒಂದಿನ ಇದೆ ಅವರುಗೂ ಅಂತ್ಯ
ಇದೂ ಎಲ್ಲದರಂತೆ ಕಾಣುವುದು ಸುಖಾಂತ್ಯ.


ತಾಂತ್ರಿಕ ವಿಧಾನ
------------
'ಕೂಲಿ ಸಮಸ್ಯೆ' ರೈತಗಂಟಿದ ಬಲವಾದ ತೊಡಕು
ತಂತ್ರಜ್ಞಾನ ಸಲಕರಣೆ ತುತರ್ಾಗಿ ಹುಡುಕು
ಗದ್ದೆ ತೋಟದೊಳಗೂ ನುಗ್ಗಲಿ ಟ್ಯಾಕ್ಟರ್ ರಿಕ್ಷಾ ಗಾಡಿ
ಕೂಲೀ ಸಮಸ್ಯೆ ಬಗೆಹರಿಯುವುದೋ ನೋಡಿ.


ಬೊಗಳೆ
------
ಕಾಂಗ್ರೆಸ್ ಸೊಪ್ಪು, ಅಕೇಶಿಯಾ ಮರವು
ಜನ ಸಾಮಾನ್ಯರ ಸ್ವಾಸ್ಥ್ಯಕ್ಕೆ ಮಾರಣಾಂತಿಕವು
ಇದು ಆಧಾರ ರಹಿತ ಬೊಗಳೆಯೋ ರಂಗ
ಈಗಿವೆರಡೂ ಕೃಷಿಕರಿಗೆ ಅವಿಭಾಜ್ಯ ಅಂಗ.


ಮಕ್ಕಳಲ್ಲಿ
---------
ದೇವರಲಿ ಭಯ ಭಕ್ತಿ ಪೂಜೆ ಪುನಸ್ಕಾರ
ಪರೀಕ್ಷೆಯು ಹತ್ತಿರ ಬಂದಾಗ ಮಾತ್ರ
ಆಟ ತುಂಟಾಟ ಪೋಲಿತನ ವರ್ಷ ಪೂತರ್ಿ ಇಹುದು
ಈ ನಡುವೆ ದೂರವೇ ಉಳಿದಿತ್ತು ಓದು.


ಪ್ರಾಯದಲ್ಲಿ
---------
ಬಿಸಿರಕ್ತದ ಪ್ರಾಯದಲಿ ಉರಿದಿದ್ದೇ ಉರಿದದ್ದು
ವೃದ್ಧಾಪ್ಯದ ಹೊಸ್ತಿಲಲಿ ತಿಂಡಿ ತೀರ್ಥ ಎಲ್ಲಾ ರದ್ದು
ದಿನಕ್ಕೆ ಮೂರ್ಹೊತ್ತೂ ನುಂಗಿದರೆ ಮಾತ್ರೆ
ಹಿಂದಿನ ಪಾಪ ತೊಳೆಯಲು ಮಾಡಬಹುದು ಯಾತ್ರೆ.


ರಾಜಕೀಯ
---------
ಚುನಾವಣೆ ಬಂದಾಗ ಬಹು ಜನರ ದೋಸ್ತಿ
ಗೆದ್ದಾಗ ಅಲ್ಲಿ ಖುಚರ್ಿಗಾಗಿ ಕುಸ್ತಿ
ಆಶ್ವಾಸನೆಗಳೇ ಮತದಾರರಿಗೆ ಆಸ್ತಿ
ಕಾದಿದೆ ಮರು ಇಲೆಕ್ಷನ್ನಲಿ ತಕ್ಕ ಶಾಸ್ತಿ


ಹೋಲಿಕೆ
------------
ಮರದಿಂದ ಮರಕ್ಕೆ ನೆಗೆಯುವಾ ಕೋತಿ
ಅದೆಂದೂ ಪಟ್ಟಿಲ್ಲ ಆತಂಕದ ಭೀತಿ
ಪಕ್ಷದಿಂ ಪಕ್ಷಕ್ಕೆ ಹಾರುವ ರಾಜನೀತಿ
ಕೋತಿಯೊಂದಿಗಿನ ಹೋಲಿಕೆಯೇ ಜಾಸ್ತಿ.


ದೀಪಾವಳಿ
--------
ದೀಪಾವಳಿ ತಂದಿತು ದೀಪಗಳ ಸಾಲು
ದನಕರುಗಳಿಗೂ ಉಂಟು ಕಡುವಿನಲಿ ಪಾಲು
ತೆನೆ ಕೊನೆಗಳು ತುಂಬಿಹ ಸಮೃದ್ಧ ಫಸಲು
ಅದ ನೋಡಿ ಮರೆಯುವಾ ಗತ ಕಾಲದ ನೋವು.


ಸಬಲೆ
--------
ಕೈ ಹಿಡಿದು ಕಳುಹಿದರೂ ಕಲಿಯದವನು ಶಾಲೆ
ಅವಗೆ ಮುಂದಕೆ ಬರುವುದೆಲ್ಲವೂ ಸೋಲೆ
ಬಾಲ್ಯ ಮೀರುವುದೊಳಗೆ ನೀ ಕಲಿ ಬಾಲೆ
ಜ್ಞಾನ ತುಂಬಿದ ಮೊಗದಿ ಮಿಂಚುವೆ ಪ್ರಭಲೆ.


ಚಂಚಲೆ
---------
ಇಟ್ಟಾಂಗ ಇರಲೊಲ್ಲಳು ಇಂದಿನಾ ಹೆಣ್ಣು
ಫ್ಯಾಶನ್ ಮಸ್ತಿ ದೋಸ್ತಿ ಶಹರದತ್ತ ಕಣ್ಣು
ಹಣ್ಣು ಸವಿದಾಂಗ ಸವಿಯುವವರೇ ಎಲ್ಲ
ಮದುವೆ ಮಾತು ಬಂದಾಗ ಕಾಲ್ಕೀಳುವನು ನಲ್ಲ.


ಬಡಪಾಯಿ ರೈತ
-------------
ಶಹರಕ್ಕೆ ಹೋದರೆ ಕಡಿನೊಣಗಳೇ ಜಾಸ್ತಿ
ಹೋದಾಗ ಮೇವಿಗೆ ವಿಪರೀತ ಕುಸ್ತಿ
ಹಿರಿಕಿರಿಯ ನೋಡದೇ ಹೀರುವವು ರಕ್ತ
ಹಣಕೆ ತಕ್ಕ ಮೌಲ್ಯ ತರದ ರೈತ ಅಶಕ್ತ.


ಹಗಲು ದರೋಡೆ
------------
ಮಂತ್ರಿ ಮಾಗಧರಿಂದ ಖಜಾನೆ ಕನ್ನ
ಎಲ್ಲ ಬಲ್ಲ ಸರಕಾರಿ ಅಧಿಕಾರಿ ಮನ್ನ
ದಿನದಿನಕೂ ದುಬಾರಿ ಬಡವ ಉಣ್ಣೋ ಅನ್ನ
ಮರೀಚಿಕೆಯೇ ಮತ್ತೆ ಇವಗೆ ಬೆಳ್ಳಿ ಚಿನ್ನ.


ಡಾ.ರಾಜ್ರಿಗೆ ಚುಟುಕು ನಮನ
------------------------
ಕಲೆಗಾಗಿ ಮೀಸಲಿಟ್ಟೆ ನಿನ್ನೀ ಜೀವ
ಅಭಿಮಾನಿ ಬಳಗಕ್ಕೇ ನೀನೇ ದೈವ
ಶಿವು, ರಾಘು, ಪುನಿತ್ ಮೂರು ಮುತ್ತನ್ನಿತ್ತೆ
ಕರುನಾಡ ಮಡಿಲಲ್ಲಿ ಜನಿಸಿ ಬಾ ಮತ್ತೆ.


ಸಾರ್ಥಕವು ನಿನ್ ದೇಹ ನಟನೆಯಲ್ಲಿ
ಮಿಡಿಯುತಿದೆ ನಮ್ ಜೀವ ನಿನ್ ನೆನಪಲ್ಲಿ
ನಾಯಕ ಗಾಯಕ ಓ ಮೇರು ನಟನೆ...
ಕಣ್ಮುಚ್ಚಿ ನಾ ಉಲಿವೆ, ನಿನ್ ಚಿತ್ರದ ಪ್ರತಿ ಘಟನೆ.


ಸಿನಿಮಾ ಜಗತ್ತು ನೀನಿರದೇ ಶೂನ್ಯ
ನಿನ್ ಸಿನಿಮಾ ಯುಗ ಯುಗಾಂತರಕೂ ಮಾನ್ಯ
ನಟ ಸಾರ್ವಭೌಮ ನಿನಗೆ ನೀನೇ ಸರಿಸಾಟಿ
ಅಭಿಮಾನಿ ಬಳಗ ಇದ್ದಿಹುದು ಕೋಟಿ.


'ವರನಟ'ನಿಗಾಗಿತ್ತು ಕಲೆಯೇ ಉಸಿರು
ಕನ್ನಡಿಗರ ಮನದಲ್ಲಿ ಸದಾನೀ ನೆಲೆಸಿರು
ಅಣ್ಣಾವ್ರ ಸಿನಿಮಾದಲ್ಲಿ ಸಮಾಜಕ್ಕೊಂದು ಸಾರಾಂಶ
ಇಂದಿನ ಸಿನಿಮಾಗಳಿಂದ ಸಾಹಿತ್ಯ ನಾಶ.


ಚೌತೀ ಹಬ್ಬ
---------
ಬಂದೀತು ನೋಡು ಚವತಿಯ ಹಬ್ಬ
ತುಂಬುವವು ಬೇಗ ಕಜ್ಜಾಯಗಳ ಡಬ್ಬ
ಚಕ್ಕುಲಿ, ಕೋಡ್ಬಳೆ, ಅತ್ರಾಸ ಹಲ್ಲಿದ್ದವರಿಗೆ
ಚಪ್ಪೆ ಉಂಡ್ಳೀಕಾಳು ಮಾತ್ರ ಶುಗರಿದ್ದವರಿಗೆ.


ಎಲ್ಲೆಂದರಲ್ಲಿ ಗಣಪ!
------------------
ಕಸುವು ಹಸಿವೂ ಇದ್ದವಗೆ ಹಬ್ಬ
ಸಾಮಾನು ರೇಟು ಕೇಳಿದಿರಾ ಅಬ್ಬ!
ಗಲ್ಲಿಗಲ್ಲಿಯಲಿಂದು ಕೂರುವನು ಗಣಪ
ಪೂಜೆಗೆ ಭಟ್ಟರೇ ಸಿಗಲಿಲ್ಲ ಪಾಪ.


ಕಲಬೆರಿಕೆ ಆಹಾರ
--------------
ಕಲಬೆರಿಕೆ ಆಹಾರ ಖಾಯಿಲೆಗೆ ಮೂಲ
ಹೆಣೆದಿಹುದು ಇಲ್ಲಿ ವ್ಯವಸ್ಥಿತ ಜಾಲ
ಅಮೃತವು ಎಂದು ತಿನ್ನುವನು ಹಸಿದವ
ಅದೇ ವಿಷವಾಗಿ ನುಂಗುವುದು ಬಡಪಾಯಿ ಜೀವ.


ಕಲಿಗಾಲ
--------
ಪ್ರೀತಿ ವಿಶ್ವಾಸ ನಂಬಿಕೆ ಸವಕಲು ನಾಣ್ಯ
ಸತ್ಯ ಧರ್ಮ ಅಹಿಂಸೆ ಶಾಂತಿ ನಗಣ್ಯ
ಹಣ ಹೆಸರು ಕೀತರ್ಿ ಪ್ರತಿಷ್ಠೆಯೇ ಗಣ್ಯ
ಸಜ್ಜನರ ಸಾಧನೆ ಸಮಾಜದಿ ಶೂನ್ಯ.


ಸಾಕಾರ ಮೂತರ್ಿ
-------------
ಮಹಿಳೆ ಒಂದು ವಸ್ತುವಲ್ಲ ಒಬ್ಬ ವ್ಯಕ್ತಿ
ಸಂಸಾರದ ಸಾರ ಅರಿತ ದಿವ್ಯ ಶಕ್ತಿ
ಕಷ್ಟ ನಷ್ಟ ಸಂಕಷ್ಟ ಅವಳಿಂದಲೇ ಮುಕ್ತಿ
ಪ್ರೀತಿ ಪ್ರೇಮ ಮಮಕಾರದ ಅಭಿವ್ಯಕ್ತಿ.


ಧರ್ಮದ ಮರ್ಮ
--------------
ಅಧ್ಯಾತ್ಮ ನಮ್ಮ ಸಂಸ್ಕ್ರತಿಯ ಒಳ ತಿರುಳು
ಪಾಶ್ಚಿಮಾತ್ಯರೂ ಆಗುತಿಹರು ಮರುಳು
ಪ್ರಪಂಚದೆಲ್ಲೆಡೆಯೂ ಅವರದೇ ನೆರಳು
ಸತ್ಯ ಧರ್ಮ ನ್ಯಾಯ ಇದ್ದಲ್ಲಿ ಹೊರಳು.


ಕೋಪ
-------
ಕ್ಷಿಪ್ರಗತಿಯಲ್ಲಿ ಅನಾಹುತವೆಗೋ ಸಿಟ್ಟು
ವಿಲಕ್ಷಣ ಕ್ಷಣದಿ ಆಗುವುದದರ ಹುಟ್ಟು
ನಾಶ ಪಡಿಸು ಅದನ ಬೇರು ಸಹಿತ ಸುಟ್ಟು
ಸಾಗದಿರು ಕೋಪದ ಕೈಗೆ ಮನವ ಕೊಟ್ಟು.


ದುಡಿಮೆಯ ಮಹತ್ವ
---------------
ದುಡಿಮೆಯೇ ದೇವರೆಂದು ಬೆವರು ಸುರಿಸಿ 'ದುಡಿ'ಯ
ಸೋಮಾರಿ ಅಲೆದರೆ ಹೀಗಳೆವರು 'ದಡಿಯ'
ತಿರಸ್ಕರಿಸು ಪೋಲಿ ಗೆಳೆಯರಿಂದ ಬಿಡಿಯ
ಕಷ್ಟ ಜೀವಿಯಾದರೆ ಆಸ್ತಿಗೇ ಒಡೆಯ.


ಪಾದುಕಾಶ್ರಮ
----------
ತೀರ್ಥಕ್ಷೇತ್ರಕ್ಕೆ ಹೋಗುವ ವೃಥಾ ಶ್ರಮವೇಕೆ?
ದರ್ಶನ ನೀಡಿರೈ ಪಾದುಕಾಶ್ರಮಕೆ
ಪ್ರಶಾಂತಮಯ ತಪೋನಿಷ್ಠ ಪುಣ್ಯ ಭೂಮಿ
ಭಕ್ತರ ಅಭಿಷ್ಠ ಪೂರೈಸುತಿಹರು ಸ್ವಾಮಿ.


ಶ್ರೀಧರರ ಆರಾಧನೆ
-------------
ಇಲ್ಲ ಸಲ್ಲದ ಯೋಚನೆಯೇಕೆ ಸುಮ್ಮನೆ?
ನಿತ್ಯ ಮಾಡು ಶ್ರೀಧರರ ಆರಾಧನೆ
ಪರಿಹಾರ ನೂರು ತರಹದೆಲ್ಲ ವೇದನೆ
ಮೂಡುವುದು ದೇವರಲಿ ಭಯ ಭಕ್ತಿ ಭಾವನೆ.


ಸಂಘ ಜೀವಿ
-----------
ಸಹೃದಯ ಸಾಧು ಸಜ್ಜನರ ಸಾಂಗತ್ಯ
ಈ ಪೀಳಿಗೆಯ ಜನಕೆ ಬಹುವೇ ಅಗತ್ಯ
ಒಂದು ಗೂಡಿ ಬದುಕು ಸವೆಸಿದವರ ಬಾಳು
ಹೆಮ್ಮರದ ಹೆಜ್ಜೇನ ಗೂಡಂತೆ ಕೇಳು.


ಚಟದಿಂದ ಚಟ್ಟ
------------
ಜೂಜು, ಮೋಜು, ಗುಟಕಾ, ಸಿಗರೇಟು ಬೀಡಿ
ಕೆಟ್ಟ ವ್ಯಸನಗಳ ಕೂಟವ ಬೇಗ ಬಿಟ್ಟು ಬಿಡಿ
ಚಟಕ್ಕಾಗಿ ಕದ್ದರೆ ಕರಗಳಿಗೆ ಬೇಡಿ
ಬೇಡಿ ತಿಂದಾದರೂ ಬದುಕಿ ನೋಡಿ.


ಸ್ವದೇಶೀ ಬಳಕೆ
-------------
ಬಿಡದೆಯೇ ಧರಿಸಿರಿ ದೇಶೀಯ ವಸ್ತ್ರ
ಇದೀಗ ಬರೀ ಬಾಯಿ ಮಾತಿನ ಶಾಸ್ತ್ರ
ವಿದೇಶೀ ಇಂಧನವೇ ಭಾರತದ ಉಸಿರು
ರಫ್ತು, ಆಮದಿರೆ ಆಥರ್ಿಕ ಸ್ಥಿತಿ ಏರುಪೇರು.



ಮಾನವೀಯತೆ
------------
ಮರೆಯದಿರು ಮಾನವಾ ಮಾನವೀಯತೆಯ
ಮನುಷತ್ವಕ್ಕದೇ ಭದ್ರ ಅಡಿಪಾಯ
ದುರ್ಬಲರ ಆಪತ್ತಿಗಾಗುವವ ನಿಜ ಮನುಜ
ಇಂತವ ಸ್ಚರ್ಗಕ್ಕೇರೋ ಆಸೆ ಇಟ್ಟರದು ಸಹಜ


ಅಸತ್ಯದ ಫಲ
------------
ಕಠಿಣ ಕಾರ್ಯ ನುಣುಚಲು ಸುಳ್ಳಾಡುವಾಗ
ಸಂದಿಗ್ಧತೆಯಲಿ ಬಾಯಿಗೆ ಹಾಕಿ ಬೀಗ
ಉದ್ವೇಗದ ಸಮಯ ನಾಲಿಗೆಗಿರಲಿ ಹಿಡಿತ
ಇಲ್ಲದಿರೆ ಸಂಗ್ರಹಿತ ಪುಣ್ಯದಲಿ ಕಡಿತ.


ಸೂತ್ರಧಾರಿ ಮನಸ್ಸು
-------------------
ಸಂಯಮ ಮನಸ್ಥಿತಿಯವ ವಿಶ್ವವನೇ ಗೆದ್ದ
ಶೀಘ್ರ ಕೋಪಿ ಹೊಸ್ತಿಲಲೇ ಎಡವಿ ಬಿದ್ದ
ಎಲುಬಿಲ್ಲದ ನಾಲಿಗೆ ನಿಮಿತ್ತ ಮಾತ್ರ
ಸಕಲವೂ ಮನಸ್ಸೇ ಹೆಣೆಯುವುದು ಸೂತ್ರ.


ಮಹಾಮಾತೆ
-----------
ದೇವನೊಬ್ಬನೇ ಈ ಜಗತ್ತಿನ ಕತರ್ೃ
ಭೂತಾಯಿಯೊಬ್ಬಳೇ ಜಗಕೆಲ್ಲ ಮಾತೃ
'ಶಸ್ತ್ರ' ವಿಶ್ವಕ್ಕಂಟಿದ ಏಕೈಕ ಶತ್ರು
ಕತರ್ೃ ಮಾತೃ ನೋಯಿಪನ ಕೇಳ್ವರಿಲ್ಲ ಸತ್ರು.


ಸಬಲೆ
-------
ಬರೀ ಮನೆ ವಾತರ್ೆ ಕೆಲಸ ತರವಲ್ಲ ಬಾಲೆ
ನಿನಗಾಗಿಯೇ ತೆರೆದಿದೆ ಸುಂದರ ಶಾಲೆ
ಮಹಿಳೆಗಂಟಿದ ಸೋಂಕು 'ಅನಾಥೆ, ,ಅಬಲೆ,
ವಿದ್ಯೆ ಕಲಿತರೆ ನೀ ಸಮೃದ್ಧ ಸಬಲೆ.


ದೇಶದ ಆಸ್ತಿ
---------
ಸಾಕ್ಷರತೆ ಸಾಧಿಸಿದಲಿ ನೀ ನಿಜ ಜಾಣೆ
ಆಗ 'ಅನಾಥೆ ಅಬಲೆ' ಈ ಶಬ್ಧ ಕಾಣೆ
ಸುಶೀಕ್ಷಿತರೇ ದೇಶಕೆ ಸಮರ್ಥ ಆಸ್ತಿ
ಮಾಡಲಿಚ್ಚಿಸುವರೆಲ್ಲ ಅವರದೇ ದೋಸ್ತಿ.


ಅಕ್ಷರ ವೃಕ್ಷ
--------------
ತೊಡಲು ಅಕ್ಷ ಮಾಲೆಗಳೊಂದಿದ್ರೆ ಸಾಕು
ಕೊರಳಿಗೆ ಇತರೇ ಹಾರ ಇನ್ನೇಕೆ ಬೇಕು
ಎದ್ದು ಕಾಣಲು ಅಕ್ಷರ ಅಲಂಕಾರ ತೊಡಿ
ಅಕ್ಷರ ವೃಕ್ಷಗಳ ಕಂಡ ಕಂಡಲ್ಲಿ ನೆಡಿ.


ಪೋಲಿಯೋ
---------
ಅಂಗವಿಕರಲ್ಲಿ ಮೂಡಿರಲಿ ಅನುಕಂಪ
ಕೈಲಾಗದವರು ಎಂದು ತೋರದಿರಿ ಕೋಪ
'ಪೋಲಿಯೊ' ಮನುಜ ಕುಲಕ್ಕಂಟಿದ ಶಾಪ
ಒಂದಾಗಿ ಕರ ಪಿಡಿದು ನಡೆಸೋಣ ಪಾಪ.


ದುಡಿಮೆ
--------
ಜಮೀನು ಇರೋದ್ಮಾತ್ರ ಕೆಲವೇ ಗುಂಟೆ
ಇರದಿದ್ರೆ ಅಕ್ಕಪಕ್ಕದವರ ತಂಟೆ
ಕೈಲಿದ್ದರೆ ಎತ್ತು, ನೊಗ, ನೇಗಿಲು, ರೆಂಟೆ
ಮನಸ್ಪೂತರ್ಿ ದುಡಿವೆ ದಿನದೆಲ್ಲ ಗಂಟೆ.


ಮಹಾದ್ವಾರ
---------
ಪಾಠಿ ಪುಸ್ತಕ ಚೀಲ ಹೊರಲೇಕೆ ಭಾರ?
ಶಾಲೆಯೇ ಭವಿಷ್ಯಕೆ ಮೂಲ ದ್ವಾರ
ವಿದ್ಯಾಥರ್ಿ ಜೀವನ ಬದುಕಲೇ ವಿಭಿನ್ನ
ವಿದ್ಯೆಯೇ ನೀಡುವುದು ನಿರಂತರ ಅನ್ನ.


ಭಾಗ್ಯ
-----------
ಮನಃಶುದ್ಧಿ ಮನುಜಗೆ ಎಲ್ಲಕ್ಕಿಂತ ಮುಖ್ಯ
ಸುಲಭದಲಿ ಆತ್ಮ ಭಗವಂತನೊಳು ಐಕ್ಯ
ಪುಣ್ಯವಂತಗೆ ಬೇಕೇ ಇದಕ್ಕಿಂತ ಭಾಗ್ಯ
ಜನಕೆ ಉಪದೇಶಿಸಲಿವ ಪರಿಪೂರ್ಣ ಯೋಗ್ಯ.


ಅಂತರಂಗ ಶುದ್ಧಿ
---------------
ಚೊಕ್ಕಚೊಕ್ಕ ಇದು ಬಹಿರಂಗದೆಡೆಗೆ?
ಅಂತರಂಗ ಕಲ್ಮಶಗಳ ಮೊದಲು ತೊಡೆ
ಭೋಗ ತೊರೆದ ಪ್ರಾಧಾನ್ಯತೆ ಭಕ್ತಿಗೆ ನೀಡಿ
ವ್ಯಸನದಿಂ ದೂರವಿದ್ದು ಜಪತಪ ಮಾಡಿ.


ವ್ಯಸನ ಮುಕ್ತ ಸಮಾಜ
-----------------
ಒಮ್ಮೆ ಯೋಗಾಭ್ಯಾಸದ ಕಡೆ ಮುಖ ತೋರು
ಆಗ ನೀ ಚಿತ್ತ ಚಾಂಚಲ್ಯದಿಂದ ಪಾರು
ಸಂಧಿಗ್ಧತೆಯಲ್ಲೂ ಸುಳ್ಳಾಡ ಬೇಡ
ವ್ಯಸನ ಮುಕ್ತ ಸಮಾಜ ಅದೆಂಥ ಸದೃಢ.


ಸುಜ್ಞಾನದ ಗೂಡು
-----------
ಅನಕ್ಷರತೆ ಇದುವೇ ಅಜ್ಞಾನದ ಜೀಡು
ಇದ ಬದಲಿಸಿದಲ್ಲಿ ಸುಜ್ಞಾನದ ಗೂಡು
ಸರ್ವರೂ ಸೇರಿ ಹಾಡಿ ಸಾಕ್ಷರತೆಯ ಹಾಡು
ಅನುದಿನವೂ ವಿದ್ಯೆಯ ಕಲಿಕೆಗಾಗಿ ಓಡು.


ಸ್ವಾತಂತ್ರ್ಯ ಚಳುವಳಿ
--------------
ಭಾರತದ ದಿಟ್ಟ ಹೋರಾಟಗಾರರ ಛಲ
ಇಂದಿಗೂ ಮರೆಯದೆ ಉಳಿದಿದೆ ಅಚಲ
ದೇಶದ ಅಭ್ಯುದಯಕೆ ಸಮೃದ್ಧ ಬಲ
ಈ ಪೀಳಿಗೆ ಜನ ಸುಖಲೋಪಾದಿ ಕುಶಲ.


ದೇಶ ಪ್ರೇಮ
---------
ದೇಶ ಸೇವೆಗೆಂದು ಹೋರಾಡಿ ಮಡಿವುದು
ಭಾರತಾಂಬೆಯ ಜೀವ ನಿಮಗಾಗಿ ಮಿಡಿವುದು
ಇತಿಹಾಸದ ಪುಟದಿ ಮಿಂಚುವ ದೇಶಪ್ರೇಮಿ
ಧನ್ಯವಾಯಿತು ಭರತ ಖಂಡದ ಭೂಮಿ.


ತ್ರಿವರ್ಣ ಧ್ವಜ

-----------
ಜಯ ಘೋಷದ ಹಾರಿಸೋ ನಮ್ಮ ಧ್ವಜ
ಓ ಭಾರತೀಯ ದೇಶ ಭಕ್ತ ದಿಗ್ಗಜ
ಅಶೃದ್ಧೆ ತೋರಿದರೆ ಖಂಡಿತಾ ಸಜೆ
ತಪ್ಪಿದರೆ ಅಧಿಕಾರಿಗಳಿಗೆ ಧೀರ್ಘ ರಜೆ.


ನಂದಾ ದೀಪ
-----------
ದೇವರೆದುರು ಬೆಳಗಿಸಿ ನಂದದಾ ದೀಪ
ಪೂಜಿಸಿ ಪುಷ್ಪಗಂಧ ಮಂಗಲ ಲೇಪ
ಜೀವನದಿ ಸತ್ಯ ನುಡಿಯಲು ಸಂಕಲ್ಪ
ಬಾಳಿನಲ್ಲಿ ನೀವಾಗಲಾರಿರಿ ಎಂದೂ ಅತ್ಯಲ್ಪ.


ಸ್ಚರ್ಣವಲ್ಲಿಗೆ
-----------
ವರ್ಷಕ್ಕೆ ಒಮ್ಮೆ ದೀಪಾರಾಧನೆ ಕಾಣಿಕೆ
ಜಂಜಾಟದಲಿ ಮರೆತು ಬಿಟ್ಟೀರಿ ಜೋಕೆ
ಸೇಗೈಯಿರಿ ನಿಮ್ಮ ಪಾಲನ್ನು ಇಟ್ಟು
ಆಥರ್ಿಕ ದೈವಿಕವಾಗಿ ಭದ್ರ ನೆಲಗಟ್ಟು.


ಮಠಕ್ಕೆ ಅಕ್ಕಿ
----------
ಅನ್ನಕ್ಕಿಡುವಾಗ ಇಡಿರಿ ಮುಷ್ಠಿ ಅಕ್ಕಿ
ಆದಾಯ ಉಳಿಯದು ಮಠದಿ ಮಿಕ್ಕಿ
ಆರೋಗ್ತ ಸಂಪನ್ನ ಸಮೃದ್ಧ ಕೇಳು
ಅಂಧಕಾರ ತೊಲಗಿ ಬೆಳಗುವುದು ಬಾಳು.


ಭಕ್ತಿ ರಸ
----------
ಮುಸ್ಸಂಜೆಯಲಿ ದೀಪ ಬೆಳಗಿ ಧೂಪ ತೋರು
ಭಕ್ತಿಯಲಿ ದೇವರನು ಕರ ಮುಗಿದು ಕೋರು
ಗತ ಪೂರ್ವದ ಅರಿಯದ ತಪ್ಪನು ತೊಳೆದು
ತಾಳ್ಮೆಯಲಿ ಬಾಳು ಭಕ್ತಿ ರಸವ ಸವಿದು.


ದಾಂಪತ್ಯ
--------
ಅರಿತು ಸಂಯಮದಿ ನಡೆಸಿದರೆ ಸಂಸರ್ಗ
ದಾಂತ್ಯದಾ ದಾರಿಯು ಸುಲಭ ಸ್ವರ್ಗ
ಹೇಳ ಹೆಸರಿಲ್ಲದಾಗುವುದು ಏಡ್ಸು
'ಸಂಸಾರ' ಹೈವೆಯಲಿ ಹರಿಯುವಾ ಗೂಡ್ಸು.


ಸಾಹಿತ್ಯ ಮಂಥನ
-------------
ಕವಿಯಾದೆನಾ! ಎಂದು ಕೇಳುವುದೇಕೆ ಕಣಿ?
ಕಾರಂತ, ಕುವೆಂಪು, ದಿನಕರ, ಕಾಯ್ಕಿಣಿ
ಮಹಾನ್ ಕವಿವರ್ಯರಾ ಸಾಹಿತ್ಯ ಮನನ
ಮಾಡಿದರೆ ಬರೆಯಲಿಚ್ಚಸುವೆ ಖಂಡಿತಾ 'ಕವನ'


ಉಳಿತಾಯ
--------
ಬೇಳೆ, ಕಾಳು ಕಡಿ, ಜೀರಿಗೆ, ಮೆಣಸು, ಸಾಸಿವೆ
ಈ ಕರಡಿಗೆಗಳಲ್ಲೇಕೆ ಹಣ ಅಡಗಿಸಿಡುವೆ?
ವನಿತೆಯರೇ ಕಟ್ಟಿರಿ ಸ್ವ ಸಹಾಯ ಗುಂಪು
ಉಳಿತಾಯದ ಹಣದಿ ನಿಮ್ಮ ಸಂಸಾರ ಸಂಪು.


ದೈವ ಬಲ
-----------
ಸ್ಚ ಕ್ಷೇತ್ರದಲ್ಲಿ ದೈವಗಳ ಪ್ರತಿಷ್ಠೆ
ತಪ್ಪದೇ ನಡೆಸಿದಲ್ಲಿ ನೇಮ ನಿಷ್ಠೆ
ಸತ್ಕಾರ್ಯಗಳಲ್ಲಿ ಬರುವುದು ಬೀಮಬಲ
ಜೀವಿತಾದ್ಯಂತ ಮೇರು ಕೀತರ್ಿ ಉಜ್ವಲ.


ಪಾನ ನಿಷೇಧ
----------
ಹಳ್ಳೀ ಹೈದ ಗಮಾರ, ಲೊಳಲೊಟ್ಟೆ
ಅವನ ಎಟ್ಟೆಯಾಗಿರಿಸುವುದು ಆ 'ಕೊಟ್ಟೆ'
ಎಂದು ಜಾರಿಗೆ ಬರುವುದೋ 'ಪಾನ ನಿಷೇಧ'?
ಆವರೆಗೂ ಏಳಲಾರದು ಬಡವನಾ ಸೌಧ.


ಸಾತ್ವಿಕತೆಯ ಶಕ್ತಿ
---------------
ಪ್ರೇತ ಭೂತಗಳ ಭಯವೇತಕ್ಕೆ ಮಿತ್ರ?
ಪೂತರ್ಿ ದಿನ ಜಪಿಸುವಾ ಗಾಯತ್ರಿ ಮಂತ್ರ
ಭಯವ ಓಡಿಸಲಿಹುದು ಸಾತ್ವಿಕತೆಯ ಶಕ್ತಿ
ನಮ್ಮಿಚ್ಚೆಯಂತೆ ಸಿಗಬಹುದು ಕೊನೆಗೆ ಮುಕ್ತಿ.


ಕಿಮ್ಮತ್ತು
----------
ಏರುತಿಹವು ದಿನ ನಿತ್ಯ ಬಳಕೆಯ ವಸ್ತು
ಸಾಮಾನ್ಯ ಜನರಿಗೋ ಬಡಿದಿರುವುದು ಸುಸ್ತು
ಮಾಯವಾಗಿದೆ ಈಗ ಗತ ಕಾಲದ ಗಮ್ಮತ್ತು
ಕಳೆದುಕೊಂಡಿಹನು ಹಣಕಾಸಿನಲಿ ಕಿಮ್ಮತ್ತು.


ವೆನಿಲ್ಲಾಕ್ಕೆ ದರ ಬಂದಾಗ
---------------
ತಿರುಗಿದರೆ ಗಸ್ತು, ದಿನ ರಾತ್ರಿ ಹೊತ್ತು
ಉಳಿಯುವುದು ತೋಟದಲಿ ವೆನಿಲ್ಲಾ ಸೊತ್ತು
ಈ ಬೆಳೆಗೆ ದರವೇನೋ ವಿಪರೀತ ಬಂತು
ಬೆಳೆಗಾರನಿಗೆ ಮಾತ್ರ ಜೀವ ಭಯದ ಜಂತು.


ಕಲಿಗಾಲದ ಮಹತ್ವ
---------------
ಪಾಪಕರ್ಮಗಳು ಪಿತ್ರಾಜರ್ಿತವಲ್ಲ
ಸಿಗದು ಹಿಂದಿನ ಜನ್ಮಗಳ ಪುಣ್ಯವೆಲ್ಲ
ಮಾಡಿದಂತಹ ಕೆಟ್ಟ ಕೆಲಸಗಳ ಫಲ
ಉಣಿಸಿಯೇ ತೀರುತ್ತದೆ ಈ ಕಲಿಗಾಲ.


ಮರಕೋತಿಯಾಟ
----------------
ಹತ್ತಿರ ಬರುತ್ತಿದ್ದ ಹಾಗೇ ಇಲೆಕ್ಷನ್
ರೂಪಾಯಿ ಸಾರಾಯಿಗಳ ಜಂಗೀ ಕಲೆಕ್ಷನ್
ಪಕ್ಷದಿಂದ ಪಕ್ಷಕ್ಕೆ ಮರಕೋತಿಯಾಟ
ಚುನಾವಣೆಯಲ್ಲಿ ಸೋತಾಗ ಮುಗಿಯಿತವರ ಆಟ.


ನುಸಿ ಪೀಡೆ
----------
ಸದ್ದಿಲ್ಲದೆ ನುಸಿ ಪೀಡೆಯೆಂಬಾ ಮಾರಿ
ಎರಗಿಹುದು ಮರದಿಂದ ಮರಗಳಿಗೆ ಹಾರಿ
ಅತ್ಯಲ್ಪವು ಕಲ್ಪವೃಕ್ಷಗಳಿರದ ತೋಟ
ನುಂಗಲಾಗದು ತೆಂಗಿರದ ಅಡಿಗೆಯೂಟ.


ಇಂಧನ ಉಳಿಸಿ
------------
ಶಹರದೆಡೆ ವಾಹನಗಳ ಭಾರೀ ಲಗ್ಗೆ
ಸುಟ್ಟು ಹಾರುವುದು ಇಂಧನದ ಹೊಗೆ ಬುಗ್ಗೆ
ಇಂಧನ ದರ ಅಗ್ಗ ಇದು ಹಗಲುಗನಸು
ಇದನ್ನರಿತು ಮಿತವ್ಯಯಗೊಳಿಸಿ ಬಳಸು.


ಬಡವನ ಗೋಳು
-----------
'ಓಟು ಕೊಡಿ' ಎಂದು ಕೇಳ ಬರುವರಿವರು ಭಿಕ್ಷೆ
ಗೆದ್ದ ಬಳಿಕ ನುಂಗಲು ಹಾಕ್ತಾರೆ ನಕ್ಷೆ
ಗಾಢಾಂಧಕಾರದಲ್ಲಿ ಬಡವನಾ ಬಾಳು
ಇವನ ಗೋಳು ಕೇಳುವರ್ಯಾರಿಹರು ಹೇಳು.


ಜಾತ್ರೆಯಲ್ಲಿ
----------
ಮಾರೆಮ್ಮನ ದರ್ಶನವಾದರೆ ಸಾಕೇ?
ಎಂದು ಹಾದಿಬದಿಯಲಿ ತಿಂದೀರಿ ಜೋಕೆ!
ಬೆಳೆಸಿದಲ್ಲಿ ಕ್ರಿಮಿಕೀಟಗಳ ಸಂತತಿ
ದೇಹದಾರೋಗ್ಯ ಹೊಂದಲಿಹುದು ಅವನತಿ.


ಜಾತ್ರೆ ವೇಳೆ
-----------
ನೆನಪಿರಲಿ ಅಮ್ನೋರ ಕಾಣಿಕೆಯ ಹುಂಡಿ
ಕಣ್ಹಾಯಿಸದಿರು ಹಾದಿಬದಿಯ ಉಂಡಿ
ಮತ್ತೆ ತಿಂದಲ್ಲಿ ಐಸ್ಕ್ರೀಮು ಐಸ್ಕೇಂಡಿ
ತಡವಿಲ್ಲದೇ ಬರುವುದು ಮೂಗು ಮಟ ಥಂಡಿ.


ಜಾತ್ರಾ ವಿಶೇಷ
-----------
ಮಧುಮೇಹಿಗಳಿಗೆಲ್ಲ ಮಿಠಾಯಿ ರದ್ದು
ಬಳೆ ಪೇಟೆಗೆ ಹೋದವಗೆ ಪೋಲೀಸರ ಗುದ್ದು
ನಾಟಕ ಸಿನೇಮ ಸರ್ಕಸ್ಸು ಬಲು ಬೋರು
ಜೂಜು ಮೋಜಾಡಿದರೆ ಮನೆ ತನಕ ದೂರು.



ಜಾತ್ರಾ ಮಜ
----------
ಪುಂಡಾಟಿಕೆ ಜನರಿಗೆ ಮಾತ್ರವೀ ಜಾತ್ರೆ
ಕುಣಿದು ಕಪ್ಪಳಿಸುವವರಿಗೆ ಮೋಜಿನಾ ಯಾತ್ರೆ
ರಾತ್ರಿ ಬೆಳಗು ಮಾಡಲು ಸ್ಥಳಿಕರಿಗೆ
ತಪ್ಪದೇ ನುಂಗಬೇಕು ನಿದ್ದೆಯ ಗುಳಿಗೆ.


ದರ ಏರಿಕೆ
----------
ಏರುತಿದೆ ದಿನ ಬಳಕೆ ವಸ್ತುಗಳ ಬಿಲ್ಲು
ಜನಸಾಮಾನ್ಯರ ಜೀವನವು ಬಹಳ ಡಲ್ಲು
ಪೇಟೆಗೆ ಓಡಾಡಲೆಂದು ಬರುವದೇ ಚೆನ್ನ
ಜೇಬೆಲ್ಲ ಖಾಲಿ ಖರೀದಿ ಮಾತ್ರ ಸೊನ್ನೆ.


ಮೀಸಲಾತಿ
---------
'ಮೀಸಲು' 'ಮೀಸಲಾತಿ' ಎಂಬ ಸವಲತ್ತು
ರಾಜಕೀಯ ಪ್ರೇರಿತ ಕಿರು ಮಸಲತ್ತು
ಮೀಸಲಾತಿಯ ಇತಿಮಿತಿಗಿರಲಿ ಒಂದು ಸಮೀತಿ
ಸ್ವ ಸಾಮಥ್ರ್ಯದಿ 'ಉನ್ನತಿ' ಬಂದರದೇ 'ಕೀತರ್ಿ'


ಧರ್ಮ ಶಾಸ್ತ್ರ
---------
ಕಂಠ ಪಾಠದಿ ಜಪಿಸಿ ಶ್ರೀ ದೇವಿಯ ಸ್ತೋತ್ರ
ದಿನವೂ ಮನನ ಮಾಡಿ ಸಕಲ ಧರ್ಮ ಶಾಸ್ತ್ರ
ತಪ್ಪದೇ ಪಾಲಿಸಿದರೆ ಇವಿಷ್ಟು ಸೂತ್ರ
ಭಯವ ಓಡಿಸಲು ಸಾಕು ಇದೊಂದೇ ಅಸ್ತ್ರ.


ಅಂಪೈರ್ ಬಳಿ ಮುನಿಸಿಕೊಂಡ ಕ್ರಿಕೇಟಿಗ
-------------------------
ಔಟಾದರೆ ಅಂಪೈರ್ ಮೇಲೇಕೆ ಆರೋಪ?
ಧಮ್ಮಿದ್ದರೆ ಆಟದಿ ತೋರು ಪ್ರತಾಪ
ಬಂದರೂ ಬರಲಿ ಬಿಡು ವೀರೋಚಿತ ಸೋಲು
ಆಗಲೂ ಗಳಿಸುವೆ ಪ್ರೇಕ್ಷಕರಾ ಒಲವು.


ಅವಿಭಕ್ತ ಕುಟುಂಬ
--------------
ಅತ್ತೆ, ಮಾವ, ಭಾವ, ನಾದಿನಿಯರ ಕಾಟ
ಇಹುದೆಂದು ಬಿಡದಿರಿ ಸಪರಿವಾರ ಕೂಟ
ಅವಿಭಕ್ತ ಕುಟುಂಬವು ಅವಿಭಾಜ್ಯ ಅಂಗ
ಮಾರ್ಗದರ್ಶಕರಿರದೇ ಬಾಳುವುದು ಹೆಂಗ?


ಮಮಕಾರ
-----------
ಮಗನೋರ್ವನೆಂದು ಮಮಕಾರವೇ ಒಡಿಯ
ಬರೀ ಇವನದು ಕ್ರಿಕೆಟ್, ಕಾಮೆಂಟ್ರಿ, ರೇಡಿಯ
ಕೊಬ್ಬಿದವನ ಕಡಿದರೆ ನಾಲ್ಕಾಳು ದಡಿಯ
ಬೈದು ಬುದ್ದಿ ಹೇಳಲೇತಕ್ಕೆ ಬಿಡಿಯ.


ಕನ್ನಡದ ಕಲಿ
----------
ದಿನಗೂಲಿ ಮಕ್ಕಳೇ ಆಡುವಿರಾ ಗೋಲಿ?
ಶುದ್ಧ ಪೋಲಿಗಳೆಂದು ಮಾಡುವರು ಗೇಲಿ
ಜೀವನದಿ ಸದ್ವ್ಯಕ್ತಿ ಆಗ ಬಯಸಿದಲ್ಲಿ
ಶ್ರಮದು ಕಲಿತು ಆಗು 'ಕನ್ನಡದ ಕಲಿ'


ನೀರಿಂಗಿಸಿ
----------
ಹೊಯ್ದೊಡನೆ ಮಳೆಗಾಲದ ಮೊಟ್ಟ ಮೊದಲ ಹದ
ಭದ್ರಪಡಿಸಿ ಕೆರೆ ಕೋಡಿ ಕಟ್ಟುಗಳ ಬದ
ಓಡೋ ನೀರ ತಡೆದು ನಿಲ್ಲಿಸಿ ಇಂಗಿಸಿ
ಮುಂದೆಂದೂ ತಟ್ಟದು 'ಜಲಕ್ಷಾಮದ ಬಿಸಿ.


ಜಪ
------
ಯಾವ ದೇವಾಲಯಕೆ ಸಂದರೂ ಕಾಣಿಕೆ
ನೆರವೇರುವುದು ನಿಮ್ಮಯ ಎಲ್ಲ ಕೋರಿಕೆ
ಜಪಿಸಿ ಮೃತ್ಯುಂಜಯ ಜಪಮಾಲಿಕೆ
ದೂರವಾಗುವುದು ಯಮಧರ್ಮನಾ ಕುಣಿಕೆ.


ಬ್ರಷ್ಠಾಚಾರ
---------
ಹೊಡೆದೋಡಿಸಿ ಬ್ರಷ್ಠಾಚಾರವೆಂಬ ಭೂತ
ಎಳೆದು ತಂದು ಹಾಕಿ ಕತ್ತರಿಸಿದಂತೆ ಹೋತ
ಸುಟ್ಟರೂ ಚಿಗುರುವುದು ಫಿನಿಕ್ಸಿನಂತೆ
ಜಗದಿ ತುಂಬಿ ಹೋಗಿದೆ ಅದರದೇ ಸಂತೆ.


ಮನೋಕಾಮನೆ
-------------
ನಿಷ್ಕಲ್ಮಶ ಮನದಿ ದೈವದ ಸಾನಿಧ್ಯ-
-ದಲ್ಲಿದ್ದು, ಪಠಿಸಿ ಸಕಲ ವೇದ ವೈವಿಧ್ಯ
ಮಾಡಿ ದೈವಾರಾಧನೆ ದಿನ ಸಮಾರಾಧನೆ
ನೆರವೇರುವುದಾಗ ಸಕಲ ಮನೋಕಾಮನೆ.


ಮೂಲ
-------
ಆತ್ಮೋನ್ನತಿಯ ಮೂಲ ವೇದೋಪನಿಷತ್ತು
ಸತ್ಪುರುಷರಲ್ಲಿ ಸಮೃದ್ಧಿ ಈ ಸ್ವತ್ತು
ಸದ್ಭಕ್ತಗೆ ಸಿದ್ದಿಸಿದ ಮಂತ್ರದ ಮರ್ಮ
ಫಲಾಪೇಕ್ಷೆಯಿರದೇ ಮಾಡುವಾ ಕರ್ಮ.


ಮಂತ್ರವೇ ಮದ್ದು
------------
ಜಪತಪಗಳಿಂದ ಮನೋವಿಕಾರವ ತಿದ್ದು
ಮನಸ್ಸಿನ ನಿಯಂತ್ರಣಕೆ ಮಂತ್ರವೇ ಮದ್ದು
ಸತ್ಸಂಪ್ರದಾಯಕೆ ಸುಭದ್ರ ಅಡಿಪಾಯ
ತಪ್ಪದೇ ಪಾಲಿಸಿದಲ್ಲಿ ಉನ್ನತ ಧ್ಯೇಯ.


ಜ್ಞಾನ
-----
ಸತ್ಸಂಗವು ಮುಕ್ತಿಯ ಮೊದಲ ಸೋಪಾನ
ಎಲ್ಲಕ್ಕಿಂತ ಪವಿತ್ರ ತೀರ್ಥ ಸ್ನಾನ
ಸಮಗ್ರ ವಿಶ್ರಾಂತಿಯೇ ಮೌನ ಧ್ಯಾನ
ಅತ್ಯಂತ ತಿಳುವಳಿಕೆಯೇ ದಿವ್ಯ ಜ್ಞಾನ.


ರೈತ ಮತ್ತು ಆತ್ಮಹತ್ಯೆ
---------------
ಜಗತ್ತಿನ ನಿಜವಾದ ಜಗದ್ಗುರು ರೈತ
ಈಗ ಅಡ್ಡಾಡುತಿಹವು ಅವನದೇ ಪ್ರೇತ
ಸಾಲವೇ ಇರಿಯಿತವನಿಗೆ ಶೂಲವಾಗಿ
ದುರಂತ ನಾಯಕನಾಗಿ ಹೋದ ನೇಗಿಲಯೋಗಿ.

ಮೋಕ್ಷ
---------
ಕ್ಷಣ ಮಾತ್ರದಿ ಪಾಪಿಷ್ಠ ರೋಗಿ ಸಾಯ್ತ!
ತಿಳಿತಿಳಿದು ಮತ್ತೇಕೋ ಕಟ್ಟುವಿರಿ ತಾಯ್ತ?
ದೇಹ ಸತ್ತು ಆತ್ಮದ ಬಿಡುಗಡೆಯೇ ಮೋಕ್ಷ
ಇದನ್ನರಿತು ಮುನ್ನಡೆದ ಮನುಜ ನಿಜ ದಕ್ಷ.


ಚಿಂತನೆ
--------
ಆಧ್ಯಾತ್ಮಿಕತೆಯಿಂದ ಮಾನಸಿಕ ನೆಮ್ಮದಿ
ಯೋಗ ಧ್ಯಾನ ಚಿಂತನೆಯಿಂದ ಸಮೃದ್ಧಿ
ದುವರ್ಿಚಾರ ದುವರ್ಾಕ್ಯ ಮೊದಲು ಕೊಲ್ಲಿ
ದೇವನಿರಲ್ಲ ಅರಿಷಡ್ವರ್ಗಗಳಿರುವಲ್ಲಿ.


ದೈವ ಕೃಪೆ
---------
ಮದ ಮೋಹ ಮತ್ಸರಗಳಿಗೆ ಪ್ರಹಾರ
ಸತ್ಯ ನಿಷ್ಠೆ ನ್ಯಾಯದ ಲಘು ಉಪಹಾರ
ಕೃಪೆ ತೋರುವನಾಗ ಶ್ರೀ ಸರ್ವ ಶಕ್ತ
ಆಗ ಕಷ್ಟ ನಷ್ಟ ಸಂಕಷ್ಟ ವ್ಯಾಧಿ ಮುಕ್ತ.


ಸಂಪತ್ತು
-----------
ಸಂತೋಷಕ್ಕೆ ಮಿಗಿಲಾದ ಸಂಪತ್ತಿಲ್ಲ
ಖುಷಿಯಿಂದ ಆದಂತಹ ಆಪತ್ತಿಲ್ಲ
ಅದ್ಯಾವ ಕಳ್ಳನೂ ಕದಿಯಲಾರನಲ್ಲ
ಇದ ತಿಳಿದರೆ ಜೀವನವೆಲ್ಲ ಬೇವೂ ಬೆಲ್ಲ.


ದೈವದೊಲವು
----------
ಸಾಧಸಿದರೆ ಅರಿಷಡ್ವರ್ಗಗಳ ಗೆಲುವು
ಸಿಗುವುದು ಸಮಸ್ತ ದೇವತೆಗಳಾ ಒಲವು
ಆಸೆ ಆಮಿಷದ ಚಂಚಲ ಚಿತ್ತ ಮನಸ್ಸು
ಸಿದ್ದಿಸದು, ಗತಿಸಿದರೂ ಅದೆಷ್ಟೇ ವಯಸ್ಸು.


ಯೋಗವೊಂದು ಯಾಗ
---------------
ಮನೋನಿಗ್ರಹಕೆ ಸುಲಭ ಸಾಧನ ಯೋಗ
ರೋಗಗಳ ತವರೂರಾಗಲು ಮೂಲ ಭೋಗ
ಜನುಮ ಜನುಮದ ಇಷ್ಟಾರ್ಥ ಸಿದ್ಧಿಗೆ ಯಾಗ
ಪಾಪ ಪುಣ್ಯದಲಿ ಯಾರೂ ಕೇಳರು ಭಾಗ.


ಶ್ರೀಧರ ಸಂದೇಶ
---------------
ಕೋಶ ಓದಿ ದೇಶ ತುರುಗಿ ಸಿಗದೇ ಮುಕ್ತಿ
ಶುದ್ದ ಮನದಿಂ ಒಸರಿ ಬರಬೇಕು ಭಕ್ತಿ
ಒಲುಮೆಯಲಿ ಓದು ಶ್ರೀಧರ ಸಂದೇಶ
ದುವರ್ಿಚಾರ ದುಗರ್ುಣ ಖಂಡಿತಾ ನಾಶ.


ದೈವ ನಿಷ್ಠೆ
------------
ಇಷ್ಟ ದೈವದಲಿ ಕಷ್ಟದಲೂ ನಿಷ್ಠೆಯಿಡಿ
ಕ್ಲಿಷ್ಟವೀ ದೈವ ಸ್ಮರಣೆ ಸ್ಪಷ್ಟ ಹೊಡಿ
ಅನಿಷ್ಠ ದುರಾದೃಷ್ಟವ ಕನಿಷ್ಠ ಮಾಡಿ
ಮಿಂಚಿನಂತ ಅದೃಷ್ಟವ ಎದುರು ನೋಡಿ.


ಆಧ್ಯಾತ್ಮದ ಅಭಾವ
--------------
ನೆಮ್ಮದಿಯ ಬದುಕಿಗೆ ಆಧ್ಯಾತ್ಮವೇ ಮದ್ದು
ಸಾಧಿಸು ಅರಿಷಡ್ವರ್ಗಗಳ ನೀ ಗೆದ್ದು
ಭಗವಂತನ ನೆರಳಿನಲಿ ನಡೆದರೆ ಸಮರ್ಥ
ಆಧ್ಯಾತ್ಮದ ಅಭಾವ ಕಾದಿದೆ ಅನರ್ಥ.


ಸಾಮರಸ್ಯ
-----------
ಒಂಟಿ ಜೀವಕೆ ಮದುವೆ ಎಂಬಾ ಮೂರ್ಗಂಟು
ಪ್ರೇಮ ಕಾಮ ಬಾಂಧವ್ಯದ ಬೆಸುಗೆ ಈ ನಂಟು
ಸಂಸಾರವಿದೋ ಜೋಡೆತ್ತಿನಾ ಬಂಡಿ
ಸತಿಪತಿ ಸೇರಿ ಸಾಗೋ ಸಾಮರಸ್ಯದ ಗಾಡಿ.


ಸಾವಯವ ಕೃಷಿ
--------------
ಸರಕಾರಿ ಗೊಬ್ಬರದ ಅಬ್ಬರದ ಬಳಕೆ
ಸೂಕ್ಷ್ಮಾಣು ಜೀವಿಗಳ ಕುಲಕ್ಕೇ ಕುಣಿಕೆ
ಬೆಳೆದ ಆಹಾರ ದೇಹಕ್ಕೆ ಮಾರಕ
ಸಾವಯವ ಬಳಕೆ ಎಲ್ಲಕ್ಕೂ ಪೂರಕ.


ಸ್ವಾಭಿಮಾನ
------------
ದಂಪತಿಗಳೇ ಸಮರ ರಹಸ್ಯ ಅದುಮಿಕೊಳ್ಳಿ
ಆಗ ಚಿಗುರೀತು ಸಾಮರಸ್ಯದ ಬಳ್ಳಿ
ಸ್ವಾಭಿಮಾನ, ಪ್ರತಿಷ್ಠೆ, ಅಹಂ ಬಿಟ್ಟು
ಪ್ರೀತಿ ವಿಶ್ವಾಸದ ಆಶಾಸೌಧವ ಕಟ್ಟು.


ಭಕ್ತನ ಯೋಗ
---------------
ಧ್ಯಾನ ಚಿಂತನೆನೆ ಮನಸ್ಸು ಅಣಿಯಾದಾಗ
ದುವರ್ಿಚಾರ ಪಲಾಯನಗೈವವು ಬೇಗ
ಫಲಪ್ರಾಪ್ತಿ, ನೆರವೇರಿದಂತೆ ಯಾಗ
ಸಧ್ಬಕ್ತರಿಗೆ ಬೇಕೇ ಇದಕ್ಕಿಂತ ಯೋಗ.


ಸುಜ್ಞಾನ
----------
ಜ್ಞಾನಾರ್ಜನೆಗೆ ಬೇಕು ಗುರುವಿನ ಓಲೈಕೆ
ಶಾಂತಿ ಸಂಯಮ ತ್ಯಾಗ ಭಕ್ತಿಯ ಆರೈಕೆ
ವಿದ್ಯೆಯೊಲಿಯೆ ಮೊಗದಿ ಮಂದಸ್ಮಿತ ಕಾಂತಿ
ಅವನತಿ, ಅಜ್ಞಾನ ಮೂಢ ನಂಬಿಕೆಯ ಭ್ರಾಂತಿ.


ಧಾಮರ್ಿಕ ಪರಂಪರೆ
---------------
ದುವ್ರ್ಯಸನಗಳೆಂಬುದು ಭಯಾನಕ ಹದ್ದು
ಅದನ ಹತ್ತಿಕ್ಕಲು ಜಪತಪವೇ ಮದ್ದು
ಧಾಮರ್ಿಕ ಪರಂಪರೆಗೆ ಆಶ್ರಮವೇ ಮೂಲ
ಅದೇ ದುಷ್ಟ ಶಕ್ತಿಯ ನಿರ್ಭಂಧ ಗೋಲ.


ತಾಯಿ
-------
ಮಾನವೀಯತೆಯೇ ಮಾತೆಯ ಮಹಾ ಆಸ್ತಿ
ಅವಳ ನಿಂದಿಪನ ಪುಣ್ಯವೆಲ್ಲಾ ನಾಸ್ತಿ
ನಿಸ್ವಾರ್ಥ ಸೇವೆ ಅವಳಿಂದಲೇ ಸಾಧ್ಯ
ತಾಯಿಯ ಆಶೀವರ್ಾದವಿರೆ ಬಾಳು ಅಭೇಧ್ಯ.


ಸ್ನೇಹ
-----------
ಗೆಳೆತನವೇ ಪ್ರೀತಿಯ ಮೊದಲ ಮೆಟ್ಟಿಲು
ದುರುಯೋಗವಾದರೆ ಬಾಳು ಕತ್ತಲು
ಪರಸ್ಪರರಲ್ಲಿ ಗೌರವ ನಂಬಿಕೆ ಇದ್ರೆ
ದಿನ ನಿತ್ಯ ಕಣ್ತುಂಬ ನೆಮ್ಮದಿಯ ನಿದ್ರೆ.


ನಂಬಿಕೆ
---------
ಅಪನಂಬಿಕೆ ತಾತ್ಸಾರ ಮತ್ಸರ ಬಿಟ್ಟು
ಪ್ರೀತಿ ವಿಶ್ವಾಸದಿ ಮಹಲನು ಕಟ್ಟು
ಗೆಳೆತನ ಪ್ರೀತಿಯ ಮೊಟ್ಟ ಮೊದಲ ಹೆಜ್ಜೆ
ಸಾಮರಸ್ಯ ಸಹಬಾಳ್ವೆ ನಡೆಸಲೇಕೆ ಲಜ್ಜೆ.


ಗುರು
---------
ಗುರುವಿನ ಮಹಾ ಮಸ್ತಕ ವಿದ್ವತ್ ಭಂಡಾರ
ವಿದ್ಯೆ ಬೇಕೇ? ತಟ್ಟಿ ಜ್ಞಾನಿ ಮನೆ ದ್ವಾರ
ಯೋಗ್ಯ ಶಿಷ್ಯನಿಗೇ ಗುರುವಾಗುವ ಭಾಗ್ಯ
ಗುರುಶಿಷ್ಯರಿರೋ ಸಮುದಾಯ ಎಂದಿದ್ದರೂ ಯೋಗ್ಯ.


ಸ್ವಾತಂತ್ರ್ಯ
------------
ಹಂಗಿರದೇ ಹೋರಾಡಿತು ದೇಶ ಭಕ್ತ ಪಡೆ
ಅಂತೂ ತೊಲಗಿತು ಪರಕೀಯರಾ ಪೀಡೆ
ಅದೇ ಖುಷಿಯಲ್ಲಿ ಹಂಚಿ ತಿನ್ನುವಾ ಪೇಡೆ
ದೇಶದ ನವ ನಿಮರ್ಾಣಕ್ಕೆ ನುಗ್ಗಿ ನಡೆ.


ವಿಧವೆ
-------------
ಪತಿಯಿರದ ಹೆಣ್ಣು ಎಂದಿದ್ದರೂ ವಧುವೇ
ಯಾರ ಹಂಗಿಲ್ಲದೇ ಆಗು ಮರು ಮದುವೆ
ಮೂರ್ಖ ಮನುಜನ ಶೃಷ್ಠಿ ವಿಧವೆ ಪಟ್ಟ
ಅಂತಹ ದುರಾತ್ಮರ ಕೈಗೆ ಕೊಡದಿರು ಜುಟ್ಟ.


ಶಾಶ್ವತ ಸೂತ್ರ
-----------
ಏಕೆ, ಆಸ್ತಿ ಅಂತಸ್ತು ನಕ್ಷತ್ರ ಗೋತ್ರ?
ಗುಣ ವಿದ್ಯೆ ನಡತೆಗಳೇ ನೆಂಟಸ್ತನದ ಸೂತ್ರ
ಪ್ರೀತಿ ವಿಶ್ವಾಸ ನಂಬಿಕೆಯೇ ಶಾಶ್ವತ ಮಿತ್ರ
ಮಿಂಚುವುದಾಗ ನಮ್ಮ ಗಮನಾರ್ಹ ಪಾತ್ರ.


ಮಿತಾಹಾರ
----------
ಜಿಹ್ವಾ ಚಾಪಲ್ಯ ರೋಗಗಳಿಗೆ ರಹದಾರಿ
ಹಿತಮಿತ ಆಹಾರ ಆರೋಗ್ಯಕ್ಕೆ ಆಭಾರಿ
ಏಕಾದಶಿ ಸಂಕಷ್ಠಿ ಚೌತಿ ಒಪ್ಪತ್ತು
ಎಂದು ತಿನ್ನದಿರಿ ರೊಟ್ಟಿ ದೋಸೆ ಇಪ್ಪತ್ತು.



ಅಕ್ಷರ ಜ್ಞಾನ
-----------
ಅಕ್ಷರ ಅಭ್ಯಾಸ ಹೊಂದದ ಪಾಪದ ಶಿಶು
ಮುಂದದು ತಿಳುವಳಿಕೆ ಜ್ಞಾನವಿರದ ಪಶು
'ಅನಕ್ಷರಸ್ಥ' ಹಣೆಪಟ್ಟಿ ಹೊತ್ತವನ ಪಾಡು
ಅವನು ಹೊಲಿಯಲೂ ಲಾಯಕ್ಕಿಲ್ಲ ಜೋಡು


ಹಿರಿಯರಿಗೆ ಗೌರವ
------------
ಯಾವುದೇ ಜಾತಿ ಪಂಥದಾ ಅನುಯಾಯಿ
ಆದರೂ ಹೇಳಿದಂತಿರು ತಂದೆ ತಾಯಿ
ಅಶಕ್ತ, ಅನಾಥ, ಅಂಗಹೀನ, ವೃದ್ಧ
ರ ಪೋಷಣೆ ಸಂರಕ್ಷಣೆಗೆ ನೀನಾಗು ಬದ್ದ.


ಸರಕು
-------
ಪ್ರೀತಿ, ಪ್ರೇಮವೆಂಬುದು ಹಳಸಲು ಸರಕು
ಕಂಡ ಕಂಡಲ್ಲಿ ಸೋರಿ ಹೋಗುವಾ ಹರುಕು
ತುಂಬು ಸಂಸಾರದಲ್ಲಿ ಮೂಡಿದರೆ ಬಿರುಕು
ಬಿರುಗಾಳಿಯಲಿ ಹಾರಿ ಹೋಗುವಾ ದರಕು.


ಮೂಢ ನಂಬಿಕೆ
----------
ಹಸುಗೂಸೆ ಎಂದೂ ಏರದಿರು ಹಸೆಮಣೆಗೆ
ಪಂಜರದೊಳಿಟ್ಟಂತೆ ಚೆಂದದಾ ಗಿಣಿಗೆ
ಬದುಕಿನಲಿ ಬಾಡಿ ಹೋಗುವುದು ಎಳೆಬಾಲೆ
ಎರಗಿದಾಗ ಮೂಢ ನಂಬಿಕೆಯೆಂಬಾ ಬಲೆ


ಸಿಂಪಲ್ ಮದುವೆ
-----------
ಕೇಳದೆಯೆ ಮಾವನಿಂದ ಕವಡೆ ಕಾಸು
ಮನ-ಮನೆಯ ತುಂಬೆಲ್ಲ ತುಂಬಿಸಿಕೋ ಕೂಸು
ತುಂಬು ಸಂಸಾರದ ಗೃಹವು ಬಲು ಸೊಗಸು
ಆಡಿಕೊಳ್ಳಲಾರರು ಯಾರೂ ಗುಸುಗುಸು.


ಕಲಿಕೆಯಿಂದ ಗಳಿಕೆ
------------
ಕಲಿಸೋ ಕಲಿಸು ಕಲಿಯದಿರುವ ಮನುಜಗೆ
ಕಲಿಯುವುದಿರುವುದು ಕೊನೆಯುಸಿರಿರುವವರೆಗೆ
ಕಲಿಯದವಗೆ ಅರ್ಧಂಬರ್ಧ ತಿಳುವಳಿಕೆ
ಕೊನೆತನಕವೂ ಉಳಿಸಲು ಆಗದು ಗಳಿಕೆ.


ಕದಿಯಲಾಗದ ಆಸ್ತಿ
------------
ಕಲಿಯದಿದ್ದರೆ ಹಿತವಚನದಿ ಅವ ಬದುಕು
ಸಂಕೋಚ ಬಿಟ್ಟು ಹಿಡಿದು ನಾಲ್ಕು ತದುಕು
ವಿದ್ಯೆ ಮಾರಾಟ ಮಾಡುವ ಸರಕಲ್ಲ
ಅಷ್ಟೇ ಕಲಿತರೂ ಕದಿಯಲಾರನು ಕಳ್ಳ.


ಸ್ವಾತಂತ್ರ್ಯೋತ್ಸವದ ದಿನ
----------------
ಕೇಳದಿರು ಬಾವುಟ ಹ್ಯಾಂಗ ಹಾರತೈತಿ
ಹಾರುವುದು ಖಚಿತ ರಾಜಕಾರಣಿಗಳ ಧೋತಿ
ಹೇಳಿದರೆ ತಿಳಿದೀತೆ ಕೋತಿಗಳಿಗೆ ನೀತಿ
ಅದು ಓತಿ ಅಂದರೆ ಪ್ರೇತಿ ಎನ್ನುವ ಜಾತಿ.


ಅಂಧಕಾರವ ಅಳಿಸುವಾ
---------------
ಅಂಧಕಾರದಿ ಕವಿದಿರುವಾ ಕರಿನೆರಳು
ಹಿಮ್ಮೆಟ್ಟಿಸುವಾ ಹೆದರದೆಯೆ ಹಗಲಿರುಳು
ಒಟ್ಟಾಗಿ ತೊಳೆಯುವಾ ಅಜ್ಞಾನದ ಕಲೆ
ಇದಕಿಲ್ಲ ಕಾನೂನು ಕಾಯಿದೆ ಕಟ್ಟಳೆ.


ಬರೀ ಭಸ್ಮ
--------
ಗುಡಿ ಗೋಪುರ ಮಸೀದಿ ಮಂದಿರ ಚಚರ್ು
ಇದಕ್ಯಾಕೋ ಮಾಡುವಿರಿ ವೃಥಾ ಖಚರ್ು
ಎಲ್ಲಾ ಸೇರಿಯೇ ರೂಪುಗೊಂಡಿದೆ ನಮ್ಮಾತ್ಮ
ಕೊನೆಯಲ್ಲಿ ಉಳಿವುದು ಬರೀ ಚಿತಾ ಭಸ್ಮ..


ಮೀಸೆ ಮೊಳೆತಾಗ
--------------------
ಹಳ್ಳೀ ಹೈದರೆಲ್ಲಾ ಹುಟ್ಟೂರಿಗೆ ಗುಡ್ ಬೈ
ಓಡಿದರೆಲ್ಲಾ ಬೆಂಗ್ಳೂರ್ ಮುಂಬೈ ದುಬೈ
ಮೈಲಿ ಕಸುವಿರೊ ತನಕ ಊರು ಸುತ್ತಿದ್ದು
ಪ್ರಾಯ ಇಳಿವಾಗ ಮನೇಲೇ ವಕ್ಕರಿಸಿದ್ದು.


ಅರಣ್ಯ ನಾಶ
------------
ಅಕೇಶಿಯಾ ನೀಲಗಿರಿ ಮ್ಯಾಂಜಿಯಂ ಗಾಳಿ
ಈ ಗಿಡಗಳೆಂದರೆ ನುಡಿವರನೇಕರು ತೆಗಳಿ
ಇವನ್ನೆಲ್ಲ ಬೆಳೆಸದಿದ್ದರೆ ಉರುವಲಿಗೇನು ಇದೆ?
ಜಂಗಲ್ಲಿನಲ್ಲಿ ಬರೀ ಫಾಥರ್ೇನಿಯಂ ಸದೆ.


ಹುಲ್ಲಿನ ಹುಟ್ಟು
--------
ನೀರು ಗೊಬ್ಬರ ಉಣಿಸಿ ಒಳ್ಳೇ ಬೀಜವ ಬಿತ್ತು
ಫಸಲು ಬರುವ ತನಕ ಬೆಳೆ ರಕ್ಷಣೆಗೆ ಒತ್ತು
ಹುಲ್ಲಿನಾ ಹುಟ್ಟು ಹುಲುಮಾನವಗೇನು ಗೊತ್ತು!
ಬೀಜ ನೀರು ರಕ್ಷಣೆ ಮಾಡಿದವರ್ಯಾರು ಹೊತ್ತು?


ವಿದ್ಯೆಯ ಮಹತ್ವ
--------------
ರಾಷ್ಟ್ರ ರಕ್ಷಣೆಯಲ್ಲಿ ಶಿಕ್ಷಣವೇ ಪೂರಕ
ಅವಿದ್ಯಾವಂತರೇ ದೇಶಕ್ಕೆ ಮಾರಕ
ಸಮಾನತೆಗೆ ನಮ್ಮೆಲ್ಲರಾ ಮಾನ್ಯತೆ
ವಿದ್ಯೆ ಕಲಿತರೇ ಜೀವನದಿ ಪಕ್ವತೆ.


ವಿಜ್ಞಾನಿಗಳ ಶೋಧನೆ
----------------
ಉಪಗ್ರಹ ಉಡಾವಣೆ ಅಪ್ರತಿಮ ಸಾಧನೆ
ನಮ್ಮ ವಿಜ್ಞಾನಿಗಳ ಹೆಮ್ಮೆಯ ಶೋಧನೆ
ದೇಶದ ಅಭಿವೃದ್ಧಿಗೆ ಭದ್ರ ಅಡಿಪಾಯ
ಹಿಂದುಳಿದವರೆಂಬ ಹಣೆಪಟ್ಟಿಗೆ ವಿದಾಯ.


ಭವಿಷ್ಯ !
----------
ಕೇಳಿದೆನು ನಾನೋರ್ವರ ಬಳಿ ಜ್ಯೋತಿಷ್ಯ
ತಿಳಿಯಿತಾಗ ಅಪರೂಪದ ಆಘಾತದ ವಿಷಯ
ಕಾಲಾವಧಿ ಸಮಾಪ್ತಿ ಹಂತದ ಆಯುಷ್ಯ
ಜೀವಿತದ ದಿನಗಳಿದವು ನಿಮಿತ್ತ ಶೇಷ.


ಬದಲಾವಣೆ
----------
ಆ ಕಾಲ ನಡೆದ ಸ್ವಾತಂತ್ರ್ಯ ಸಂಗ್ರಾಮ
ಪಸರಿಸಿತ್ತು ದೇಶದ ಪ್ರತಿಯೊಂದು ಗ್ರಾಮ
ಇಂದಿನಾ ಜನಮನದಿ ಬರೀ ಪಂಗನಾಮ
ತಿಳಿ ಹೇಳಲಿವಕೆ ನೀರಲಿ ಮಾಡಿದ ಹೋಮ.


ಸ್ಮರಣೆ
-------
ಭಾರತದ ಸಂಜಾತ ನಿಜ ದೇಶ ಭಕ
್ತದೇಶದ ನವ ನಿಮರ್ಾಣದಲಿ ಅವ ಸ್ವಶಕ್ತ
ಪ್ರತೀ ಬರಿಯ ಸ್ವಾತಂತ್ರ್ಯ ಆಚರಣೆ
ಹುತಾತ್ಮ ಯೋಧರುಗಳ ಪುಣ್ಯ ಸ್ಮರಣೆ.


ಬಳುವಳಿ
--------

ಸ್ವಾತಂತ್ರ್ಯ ಹೋರಾಟಗಾರರ ಚಳುವಳಿ
ಇಂದಿನಾ ಪೀಳಿಗೆಗದು ಮುಖ್ಯ ಬಳುವಳಿ
ಈ ಸವಿ ನೆನಪಿಗಾಗಿ ಚಿಣ್ಣರಿಗೆ ಸಿಹಿ ಹಂಚಿ
ಖಾಲಿ ಆಗುವುದೆಂದು ನೋಡದೆಯೆ ಸಂಚಿ.


ಖಾಯಿಲೆಗೆ ಮೂಲ
-------------
'ನೋವೇ' ಇರದಿರೆ ಬದುಕು ಅದೆಷ್ಟು ಚಂದ!
ನವರಸಗಳಿರಗ ಬಾಳು ನೀರಸ ಮಂದ
ಹೇಡುತನದ ಲಕ್ಷಣ, ಬರೀ ಸುಖದ ಬಯಕೆ
ಬೊಜ್ಜು ಬೆಳೆಯಲು ರೋಗ ಬಂದಾವು ಜೋಕೆ.


ಆಸ್ಥಿರ ತಾಕತ್ತು
--------------
ದೇವಸ್ಮರಣೆ ಇರದ ನಿರೀಕ್ಷೆ ನೀರುಪಾಲು
ನಾಸ್ತಿಕರಿಗೆ ಮಾತ್ರವೇ ನಿರಂತರ ಸೋಲು
ನಾಮ ಸ್ಮರಣೆಯಿಂದ ತಪ್ಪೀತು ಆಪತ್ತು
ಕಾರ್ಯಸಿದ್ಧಿಗೆ ದಕ್ಕೀತು ನೂರಾನೆ ತಾಕತ್ತು.



ಹಣೆಬರಹ
----------
ಸಾಲವೆಂಬುದು ಜೀವನದ ಕೊನೆಯ ಅಂಕ
ನೀಡಬೇಕಿಲ್ಲ ಪರವಾನಿಗೆ ಸುಂಕ
ಬದಲಾದೀತು ಸುಖ, ದುಃಖ, ಪ್ರೀತಿ, ವಿರಹ
ಎಂದಿಗೂ ತಿರುಚಲಾಗದು ಬ್ರಹ್ಮನ ಹಣೆಬರಹ.



ಸಹಾಯ
----------
ಆಪತ್ತಿಗಾದವನೇ ನಿಜವಾದ ನೆಂಟ
ಬಿದ್ದಾಗ ಎತ್ತಿದವನೇ ನಿಜವಾದ ಭಂಟ
ಅಬಲರ ಕೈ ಹಿಡಿದು ನಡೆಸಿದವ ಸಬಲ
ಬರೀ ವೇಸ್ಟು ಅಪ್ರಯೋಜಕನ ತೋಳ್ಬಲ.



ಮಾನವೀಯತೆ
----------
ಅನುಭವವೇ ಕಾರ್ಯ ಸಿದ್ದಿಗೆ ಮೂಲ
ಅನುಮಾನವೇ ಕಾರ್ಯವಿಘ್ನದ ಬಾಲ
ಮಣ್ಣುಗೂಡದಿರಲಿ ಮಾನವೀಯತೆ ಮನುಜ
ಸಾರು ಅರಿಷಡ್ವರ್ಗಗಳ ಮೇಲೆ ದಿಗ್ವಿಜಯ.



ದೇಹವಿದು ದೇಗುಲ
--------------
ಆಸಕ್ತಿಯೇ ಗುರಿ ತಲುಪಿಸುವಾ ಶಕ್ತಿ
ಭಕ್ತಿಯೇ ಭಕ್ತನಿಗೆ ಕೊಡಿಸಲಿದೆ ಮುಕ್ತಿ
ದೈವ ಬಲ ನಂಬಿದವಗೇ ವಿಜಯಮಾಲೆ
ದೇಹವೆಂಬ ದೇಗುಲದಿ ದೈವಕ್ಕಿರಲಿ ಶಾಶ್ವತ ನೆಲೆ.



ಯೋಗ್ಯತೆ
----------
ವಿಜ್ಞಾನದ ಮೊದಲ ಮೆಟ್ಟಿಲು ವಿದ್ಯಾಭ್ಯಾಸ
ಅಜ್ಷಾನಿಯ ಮೊಗ ಕಾಂತಿಯಿರದೇ ಅಭಾಸ
ಅಪ್ರಮಾಣಿಕತೆ ಎಂದಿದ್ದರೂ ಅಪಾಯ
ಮನಕೆ ನಾಟಿದರೆ ಅಳಿಸಲಾರದ ಗಾಯ.



ಸತ್ಯವಂತ
---------
ನಿಷ್ಕಾಮ ಕರ್ಮ ನಿಜವಾದ ಧರ್ಮ
ಬದುಕು ಉಜ್ವಲ, ತಿಳಿದರೆ ಅದರ ಮರ್ಮ
ಸಾಧನೆಗಿಂತ ಸಾರ್ಥಕತೆಗಿದೆ ಮಹತ್ವ
ಸತ್ಯವಂತನ ಮೊಗದಿ ನಿರಂತರ ಸತ್ವ.



ದೈವ ನೀಡಿದ ಆಸ್ತಿ
---------------
ದೈವ ನರಗೆ ಕೊಟ್ಟ ಅದ್ಭುತ ಅಂಗ ಮೆದುಳು
ಉಪಯೋಗಿಸೋ ಕಲೆ ಕರಗತವಾಗಲಿ ಮೊದಲು
ಮನುಜನ ಪ್ರತಿ ಬಹು ಮುಖ್ಯ ಅವಯವವು
ಒಂದು ಸ್ತಬ್ಧವಾದರೂ ಗ್ಯಾರೆಂಟಿ ಸಾವು.



ವಿವಾಹ ಬಂಧನ
-------------
ಬ್ರಹ್ಮಚಾರಿ ಆಗ್ತೀನಿ ಅಂತೀರಾ ಜೋಕೆ!
ಎದುರಿಸಲು ಸಜ್ಜಾಗಿ ಆಪ್ತೇಷ್ಠರ ಟೀಕೆ
ಜೀವನದಿ ಮದುವೆ ಒಂದು ಪವಿತ್ರ ಬಂಧ
ಮಿಂಚದು ಸಂಗಾತಿ ಇರದವರ ಮುಖಾರವಿಂದ.



ನಿದ್ರೆ
-------
ಹಗಲಿಡಿ ದುಡಿ ರಾತ್ರಿ ಕಣ್ತುಂಬಾ ನಿದ್ರೆ
ನಂತ್ರ ಬೇಕೆಂದ್ರೂ ನಿದ್ರೆ ಸಿಗದು ಉದ್ರೆ
ಯಾವ ಕಳ್ಳನೂ ಕದಿಯಲಾರ ಈ ಸುಖ
ಮತ್ತೆ ಕೇಳಬೇಕೇ ಜೊತೆಗಿದ್ರೆ ಸಖ[ಸಖಿ].



ಕಾವ್ಯ ಜನನ
------------
ಕಲ್ಪನೆಗಳನು ಕುದುರಿಸಲು ಕಾವ್ಯ ಬೇಕು
ಕಾವ್ಯ ಪೂರ್ಣಗೊಳ್ಳಲು ಪ್ರೇರಣೆ ಸಾಕು
ಕೇಳುಗರ ದಂಡಿರಲು ಕಾವ್ಯವು ಜೀವಂತ
ಸಾಹಿತಿಗೆ ಇರಬಾರದು ಎಂದೂ ಬಲವಂತ.


ಬದಲಾದ ನಿಲುವು
----------------
ಧ್ಯಾನ ವೈರಾಗ್ಯದ ಸಂಕೇತವಲ್ಲ
ಮೌನದ ಮಹತ್ವ ಬಲ್ಲವನೇ ಬಲ್ಲ
ಮನುಜನ ಸಮಸ್ಯೆಗೆ ಸಮಾಧಾನ, ಧ್ಯಾನ
ಆಧ್ಯಾತ್ಮಿಕತೆಯತ್ತ ಯುವ ಜನತೆಯ ಚಿತ್ತ.


ಶ್ರಮಪೂರಿತ ದುಡಿಮೆ
---------------

ಶ್ರಮ ರಹಿತ ದುಡಿತ ಚಿನ್ನದ ಬಾಳಿಗೆ ನಾಂದಿ
ಇಲ್ಲದಿರೆ ದೇಹ ರೋಗದ ಗೂಡಲಿ ಬಂಧಿ
ಸೋಮಾರಿ ಅಲೆದರೆ ಹೀಗಳೆವರು ದಡಿಯ
ಕಷ್ಟ ಜೀವಿಯಾದರೆ ಆಸ್ತಿಗೇ ಒಡೆಯ.


ಸುಳ್ಳಾಗದ ಸತ್ಯ
---------------
ಅನುಭವದ ನುಡಿಗಳಿಗೆ ಎಂದೂ ಸಾವಿಲ್ಲ
ಸತ್ಯ ಧರ್ಮ ಪರಿಪಾಲಕಗೆ ಎಂದೂ ಸೋಲಿಲ್ಲ
ಲೋಕಾನುಭವಿಯ ನುಡಿ ಎಂದೂ ಸುಳ್ಳಲ್ಲ
ನರಗೆ ಸಾವು ನೋವು ಮಾತ್ರ ಎಂದೂ ತಪ್ಪಲ್ಲ.


ಸಾಮರಸ್ಯ
-----------
ಸಂಸಾರವಿದೋ ಜೀವನದ ರಸಸೂತ್ರ
ಸತಿಪತಿಯರದೇ ಇಲ್ಲಿ ಪ್ರಮುಖ ಪಾತ್ರ
ಗಂಡ ಹೆಂಡಿರ ನಡುವೆ ಅಂತರ ಅತಂತ್ರ
ಬಿಡಿ ಸ್ವಾಭಿಮಾನ ಪ್ರತಿಷ್ಠೆಯ ಮಂತ್ರ.


ಮೂರ್ಖರ ಪೆಟ್ಟಿಗೆ
-------------
ಟಿ.ವಿ ಮಕ್ಕಳ ಸ್ಮರಣ ಶಕ್ತಿಗೆ ಧಕ್ಕೆ
ಪುಸ್ತಕ ಬೇಕು ಮನಸ್ಸಿನ ವಿಕಾಸಕ್ಕೆ
ದುರ್ಬಲ ದೃಷ್ಠಿ ಶಕ್ತಿ ಬೌದ್ಧಿಕ ಕಸರತ್ತು
ವಿಲಕ್ಷಣ ವ್ಯಕ್ತಿತ್ವ ಮಕ್ಕಳ ಸೊತ್ತು.


ನಂಬಿಕೆ
---------
ನೈಜ ಪ್ರಾರ್ಥನೆಯಿಂದ ಪಾಪ ಪರಿಹಾರ
ಕೆಟ್ಟ ಕೀಟ ಕೂಟದ ಕಾಟ ಅನತಿ ದೂರ
ಸತ್ಕಾರರ್ಯಕೆ ದೇವರ ಮೇಲೆ ಹಾಕಿ ಭಾರ
ಭಗವಂತನ ಹೃದಯಕೆ ಮುಕ್ತ ದ್ವಾರ.


ಚಿಂತೆ
---------
ಗುಡಿಸಲು ಹೊಲ ಮನೆ ದನಕರ ಚಾಕರಿ ನಡುವೆ
ನಮಗೇಕೆ ದೇಶದುದ್ಧಾರದಾ ಗೊಡವೆ!
ಹಚ್ಚಿಕೊಂಡರೆ ಚಿಂತೆ ನೂರಾರು ಉಂಟು
ಉಗುಳ ತೆಗಳಲಾರದೇ ಊರುವವು ಟೆಂಟು.


ಕಿಮ್ಮತ್ತಿಲ್ಲದ ಕಾಯಕ
-------------
ಮಣ್ಣಿಗೆ ಹಣ ಸುರಿ ಸುರಿದು ಸಕಲವೂ ವ್ಯಯ
ದಮಡಿ ಕಿಮ್ಮತ್ತಿಲ್ಲದ ಕಾಯ ವ್ಯವಸಾಯ
ಮಣ್ಣ ಮಕ್ಕಳಿಗೇ ಭಯ ಬೇಸಾಯವೆಂದ್ರೆ
ಕೊಂಚವೂ ಲಾಭ ಬರದು ಬೆವರಲ್ಲೇ ಮಿಂದ್ರೆ.


ಪ್ರಭಲೆ
----------
ಕೀಳರಿಮೆ ಮಹಿಳೆಯರನು ಕೊರೆಯುವಾ ಕೀಟ
ನಾಚಿಕೆ ಉಸಿರಿರುವವರೆಗೂ ಉರುಳದ ಪೇಟ
ಹುಟ್ಟ ಹೊತ್ತಿಹಳು ಅಬಲೆಯೆಂಬ ಹಣೆ ಪಟ್ಟಿ
ಭಟ್ಟಿ ಇಳಿಸಿದಷ್ಟೂ ಆಕೆ ನಿಜಕ್ಕೂ ಗಟ್ಟಿ.


ತಂತ್ರ
---------
ಆಧ್ಯಾತ್ಮಿಕತೆ ಆಸ್ತಿಕರಿಗೆ ದೊಡ್ಡ ಸ್ವತ್ತು
ಅತ್ಯಾಧುನಿಕತೆ ತಂದಿಟ್ಟಿತು ವಿಪತ್ತು
ಧ್ಯಾನ, ಮೋಕ್ಷ ಸಾಧನೆಯ ಮೂಲ ಮಂತ್ರ
ದೈವವೊಲಿಯಲು ಇದುವೇ ಏಕಮಾತ್ರ ತಂತ್ರ .



----------------------------------------------------------------------------------------------------
ಚುಟುಕು ರಚನೆ - ದತ್ತಗುರು ಕಂಠಿ.
ಪೊ - ಉಂಚಳ್ಳಿ.
ತಾ - ಸಿರಸಿ, ಜಿ - ಉತ್ತರ ಕನ್ನಡ, 581318, ಮೊ -9483648230.
======================================================================================================

1 comment:

  1. Nice Job... great ideas and thoughts... congratulations

    ReplyDelete